Google KK Doodle: ಬಾಲಿವುಡ್ ಗಾಯಕನಿಗೆ ಗೂಗಲ್ ಗೌರವ!

google
Published on

ನವದೆಹಲಿ: ಗೂಗಲ್​ ಇತ್ತೀಚಿನ ವರ್ಷಗಳಲ್ಲಿ ತನ್ನ ಸೃಜನಾತ್ಮಕ ಡೂಡಲ್‌(Google KK Doodle)ಗಳ ಮೂಲಕ ಕಲೆ, ವಿಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ವ್ಯಕ್ತಿಗಳನ್ನು ಮತ್ತು ಮಹತ್ವದ ಘಟನೆಗಳನ್ನು ಗೌರವಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿದೆ. ಅದೇ ರೀತಿ ಶುಕ್ರವಾರ(ಅ.25)ಸಂಗೀತ ಜಗತ್ತಿನಲ್ಲಿ ಛಾಪು ಮೂಡಿಸಿದ ಬಾಲಿವುಡ್ ಗಾಯಕನಿಗೆ ಗೌರವ ಸಲ್ಲಿಸಿದೆ.

ಕೆಕೆ ಎಂದು ಜನಪ್ರಿಯವಾಗಿರುವ ಬಾಲಿವುಡ್​ನ ಪ್ರಸಿದ್ಧ ಹಿನ್ನೆಲೆ ಗಾಯಕ, ಲೆಜೆಂಡರಿ ಕೃಷ್ಣಕುಮಾರ್ ಕುನ್ನತ್(ಕೆಕೆ) ಅವರಿಗೆ ಗೌರವ ಸಲ್ಲಿಸಿದೆ. 1996 ರಲ್ಲಿ ಇದೇ ದಿನದಂದು, ಮಾಚಿಸ್ ಚಲನಚಿತ್ರದಲ್ಲಿ ವೈಶಿಷ್ಟ್ಯವಾಗಿ 'ಚೋಡ್ ಆಯೆ ಹಮ್' ಹಾಡಿನಲ್ಲಿ ಕೆಕೆ ಹಿನ್ನಲೆ ಗಾಯಕರಾಗಿ ಪಾದಾರ್ಪಣೆ ಮಾಡಿದ್ದರು.

ಗೂಗಲ್​ನ ಈ ಗೌರವವು ಲಕ್ಷಾಂತರ ಜನರ ಹೃದಯದಲ್ಲಿ ಅವರ ಧ್ವನಿಯು ಶಾಶ್ವತವಾಗಿ ಪ್ರತಿಧ್ವನಿಸುವ ಪ್ರೀತಿಯ ಕಲಾವಿದನಿಗೆ ಸೂಕ್ತವಾದ ಗೌರವವಾಗಿದೆ.

ಕೃಷ್ಣ ಕುಮಾರ್ ಕುನ್ನತ್ ಹಿಂದಿಯಲ್ಲಿ 500ಕ್ಕೂ ಹೆಚ್ಚು ಹಾಡುಗಳನ್ನು ಹಾಗೂ ಇತರ ಭಾರತೀಯ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ರಂಜಿಸಿದ್ದಾರೆ. ಪ್ರೇಕ್ಷಕರ ಹೃದಯದಲ್ಲಿ ಅವರ ಹಾಡುಗಳು ಇಂದಿಗೂ ಸ್ಥಾನ ಪಡೆದುಕೊಂಡಿವೆ. ಅವರ ಗೌರವಾರ್ಥವಾಗಿ ಗೂಗಲ್ ವಿಶೇಷವಾದ ಇವಾಲಾ ಡೂಡಲ್ ಅನಿಮೇಷನ್ ಅನ್ನು ಪ್ರಕಟಿಸಿದೆ.

ಡೂಡಲ್‌ನಲ್ಲಿ, ಕೆಕೆ ನಿಂತು ಹಾಡನ್ನು ಹಾಡುತ್ತಿದ್ದಾರೆ. ಅವರ ಕೈಯಲ್ಲಿ ಮೈಕ್ ಇದೆ. ಹಿನ್ನೆಲೆಯಲ್ಲಿ ಗೂಗಲ್​ ಹೆಸರು ಕಾಣಿಸಿಕೊಂಡಿದೆ. ಸಂಗೀತ ಚಿಹ್ನೆಗಳು, ಸ್ಟಾರ್ ಎಮೋಜಿಗಳನ್ನು ಒಳಗೊಂಡಿದೆ.

ಇನ್ನು ವೆಬ್‌ಸೈಟ್‌ನಲ್ಲಿ ಅವರನ್ನು ಹಾಡಿಹೊಗಳಿ ಟಿಪ್ಪಣಿ ಬರೆದಿದ್ದಾರೆ. ಬಹುಮುಖ ಪ್ರತಿಭೆಯ ಮತ್ತು ಜನಪ್ರಿಯ ಭಾರತೀಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರ ಯಶಸ್ಸನ್ನು ಗೂಗಲ್ ಆಚರಿಸುತ್ತದೆ. ಅವರು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮುಂತಾದ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. "ಅವರು ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡಿಂಗ್ ಮಾಡಲು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ" ಎಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಅವರು ಹಿಂದಿಯಲ್ಲಿ ಖುದಾ ಜಾನೆ, ಆಂಖೋನ್ ಮೇ ತೇರಿ, ತೂ ಹಿ ಮೇರಿ ಶಾಬ್ ಹೈ ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಮೂರು ದಶಕಗಳ ವೃತ್ತಿಜೀವನದಲ್ಲಿ ಅವರು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ತೆಲುಗು, ಬೆಂಗಾಲಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಮೇ 31, 2022 ರಂದು ಕೋಲ್ಕತ್ತಾದಲ್ಲಿ ನಿಧನರಾದರು. ಅವರು ಸಂಗೀತ ಕಚೇರಿಯ ಕೆಲವು ಗಂಟೆಗಳ ನಂತರ ನಿಧನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net