

ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಜಿಯೋ ಬಳಕೆದಾರರಿಗೆ ಇದೀಗ ಗೂಗಲ್ ಬರೋಬ್ಬರಿ 35,100 ರೂ. ಮೌಲ್ಯದ ಗೂಗಲ್ ಎಐ ಪ್ರೊ (Google AI Pro) ಅನ್ನು 18 ತಿಂಗಳ ಕಾಲ ಉಚಿತವಾಗಿ ನೀಡುತ್ತಿದೆ.
ಇದರ ಅಡಿಯಲ್ಲಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ವೇಗವಾಗಿ ವಿಸ್ತರಿಸಲು ಎರಡೂ ಕಂಪನಿಗಳು ಜಂಟಿಯಾಗಿ ಕೆಲಸ ಮಾಡುತ್ತಿರುವುದು ಗಮನಾರ್ಹ. ಈ ಪಾಲುದಾರಿಕೆ ಪ್ರಮುಖ ಅಂಶವೆಂದರೆ ಜಿಯೋ ಬಳಕೆದಾರರು 18 ತಿಂಗಳವರೆಗೆ ಗೂಗಲ್ ಎಐ ಪ್ರೊ (Google AI Pro) ಪ್ಲಾನ್ಗೆ ಉಚಿತ ಬಳಕೆ ಅವಕಾಶವನ್ನು ಪಡೆಯಲಿದ್ದಾರೆ. ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು 35,100 ರೂ. ಮೌಲ್ಯದ್ದಾಗಿದೆ. ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಯುಸರ್ಸ್ಗೆ ವಿಸ್ತೃತ ಅವಕಾಶಗಳು ದೊರೆಯಲಿವೆ.
ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಸಹ ಈ ಆಫರ್‌ನಲ್ಲಿ ಸೇರಿಸಲಾಗಿದೆ. ಆರಂಭದಲ್ಲಿ ಈ ವೈಶಿಷ್ಟ್ಯವು 18ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ನಂತರದಲ್ಲಿ ಎಲ್ಲಾ ಬಳಕೆದಾರರಿಗೂ ಅನ್ವಯಿಸಲಿದೆ. ಕಂಪನಿಯು ಈ ಎಐ ವೈಶಿಷ್ಟ್ಯವನ್ನು 5ಜಿ ಅನ್‌ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮುಖ್ಯವಾಗಿ ಒದಗಿಸುತ್ತದೆ.
ರಿಲಯನ್ಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಜಂಟಿಯಾಗಿ ಈ ವಿಶೇಷ ಎಐ ವೈಶಿಷ್ಟ್ಯವನ್ನು ಜಿಯೋ ಗ್ರಾಹಕರಿಗೆಂದು ಪ್ರಸ್ತುತ ಪಡಿಸಿದೆ. ಪ್ರತಿ ಭಾರತೀಯ ಗ್ರಾಹಕ, ಸಂಸ್ಥೆ ಮತ್ತು ಡೆವಲಪರ್ ಅನ್ನು ಎಐನೊಂದಿಗೆ ಜೋಡಿಸುವುದು ಇದರ ಧ್ಯೇಯವಾಗಿದೆ. ಪಾಲುದಾರಿಕೆಯು ರಿಲಯನ್ಸ್‌ನ "ಎಲ್ಲರಿಗೂ ಎಐ” ಎಂಬ ಸಂದೇಶವನ್ನು ಸಾರಿದೆ.
ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, "145 ಕೋಟಿ ಭಾರತೀಯರಿಗೆ ಎಐ ಸೇವೆಗಳು ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಗೂಗಲ್‌ನಂತಹ ದೀರ್ಘಕಾಲೀನ ಪಾಲುದಾರರೊಂದಿಗೆ ನಾವು ಭಾರತವನ್ನು ಕೇವಲ ಎಐ-ಸಕ್ರಿಯಗೊಳಿಸುವುದಷ್ಟೇ ಅಲ್ಲದೆ, ಪ್ರತಿ ನಾಗರಿಕ ಮತ್ತು ಸಂಸ್ಥೆಯು ಎಐ ಬಳಸಿ ಅಭಿವೃದ್ಧಿ ಹೊಂದಲು ಕೃತಕ ಬುದ್ಧಿಮತ್ತೆ ಸಕ್ರಿಯಗೊಳಿಸಬೇಕು ಎಂದು ಬಯಸುತ್ತೇವೆ” ಎಂದಿದ್ದಾರೆ.
"ಭಾರತದ ಡಿಜಿಟಲ್ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ರಿಲಯನ್ಸ್ ಪ್ರಮುಖ ಪಾಲುದಾರ. ಈಗ ನಾವು ಈ ಸಹಯೋಗವನ್ನು ಎಐ ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಉಪಕ್ರಮವು ಗೂಗಲ್ನ ಅತ್ಯಾಧುನಿಕ ಎಐ ಪರಿಕರಗಳನ್ನು ಭಾರತೀಯ ಗ್ರಾಹಕರು, ವ್ಯವಹಾರಗಳು ಮತ್ತು ಡೆವಲಪರ್‌ಗಳಿಗೆ ತರುತ್ತದೆ” ಎಂದು ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಭಾರತವು ಜಾಗತಿಕ ಎಐ ಸೆಂಟರ್ ಆಗುವುದಕ್ಕೆ ಸಹಾಯ ಮಾಡಲು, ರಿಲಯನ್ಸ್ ಮತ್ತು ಗೂಗಲ್ ಸೇರಿ ಭಾರತದ ಕಂಪನಿಗಳಿಗೆ ಸುಧಾರಿತ ಎಐ ಹಾರ್ಡ್‌ವೇರ್, ಅಂದರೆ ಟೆನ್ಸರ್ ಪ್ರೊಸೆಸಿಂಗ್ ಯೂನಿಟ್‌ಗಳು (TPUಗಳು)ಗೆ ಬಳಕೆಯನ್ನು ವಿಸ್ತರಿಸುತ್ತವೆ. ಇದು ಭಾರತೀಯ ವ್ಯವಹಾರಗಳು ದೊಡ್ಡ ಮತ್ತು ಸಂಕೀರ್ಣ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಹಕಾರಿ.