

ಸಾಗರ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಧೋರಣೆಯಿಂದ ಬೇಸತ್ತು ಏ.18ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಎದುರು ಗೋಪಾಲಕೃಷ್ಣ ಬೇಳೂರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಭರವಸೆ ನೀಡಿದ್ದರು. ಆದರೆ ಗೆದ್ದ ನಂತರ ನನ್ನನ್ನು, ನನ್ನ ಬೆಂಬಲಿಗರನ್ನು ಮೂಲೆಗುಂಪು ಮಾಡಿದ್ದಾರೆ. ಗೋಪಾಲಕೃಷ್ಣ ಬೇಳೂರು ಈ ಹಿಂದೆಯೂ ಜನಸ್ನೇಹಿ, ಹಿರಿಯ ಮುಖಂಡರನ್ನು ಕಡೆಗಣಿಸಿದ್ದರು. ಈ ಬಾರಿ ಅದನ್ನೇ ಮುಂದುವರಿಸಿದ್ದಾರೆ. ಶಾಸಕರ ದುರಹಂಕಾರದ ನಡೆಯನ್ನು ಖಂಡಿಸಿ ಬಿಜೆಪಿ ಸೇರುತ್ತಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ಮೂರು ದಶಕಗಳಿಂದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸೇರಿ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಈಗ ದೇಶದ ಹಿತದೃಷ್ಟಿ, ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವವನ್ನು ಒಪ್ಪಿ, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧ್ದಿಗೆ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಸೇರುತ್ತಿದ್ದೇನೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಯಾರ ಅಭಿಪ್ರಾಯವನ್ನೂ ಕೇಳಲಿಲ್ಲ. ಏಕಪಕ್ಷೀಯ ನಿರ್ಧಾರ ಕೈಗೊಂಡರು. ಶಾಸಕರು ಕ್ಷೇತ್ರದಲ್ಲಿ ತಮ್ಮದೊಂದು ಗುಂಪು ಕಟ್ಟಿಕೊಂಡು ಪಕ್ಷದ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸಿದ್ದಾರೆ. ಇವರ ಈ ಧೋರಣೆಗೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ ಎಂದರು.
ಕಾಗೋಡು ತಿಮ್ಮಪ್ಪರನ್ನೂ ಕಡೆಗಣನೆ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಾಯಕತ್ವದಲ್ಲಿ ನಾನು ಕೆಲಸ ಮಾಡಿಕೊಂಡು ಬಂದವನು. ನನಗೆ ರಾಜಕೀಯ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿದ ಎಸ್.ಬಂಗಾರಪ್ಪ ಅವರನ್ನು ಎಂದಿಗೂ ಮರೆಯುವುದಿಲ್ಲ. ಆದರೆ ಬೇಳೂರು ಗೆದ್ದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಕಾಗೋಡು ತಿಮ್ಮಪ್ಪ ಅವರ ಮಾತಿಗೆ ಬೆಲೆಯೇ ಇಲ್ಲ. ಬೇಳೂರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ಹೆಸರು ಬಳಸದೆ ಗೆದ್ದು ಬರಲಿ ನೋಡೋಣ ಎಂದು ಸವಾಲೆಸೆದರು.
ಮಿತಿಮೀರಿದ ಭ್ರಷ್ಟಾಚಾರ: ಕ್ಷೇತ್ರ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾಮರ್ಥ್ಯ ಸೌಧದಲ್ಲಿ ಕೆಡಿಪಿ ಸಭೆ ನಡೆಸಬೇಕಾದ ಶಾಸಕರು ಪ್ರವಾಸಿ ಮಂದಿರದಲ್ಲಿ ನಡೆಸುತ್ತಿದ್ದಾರೆ. ಮರಳು ಮಾಫಿಯಾ ಮಿತಿಮೀರಿದೆ. ಮಾಸೂರಿನಲ್ಲಿರುವ ಮದ್ಯದಂಗಡಿ ಯಾರ ಹೆಸರಿನಲ್ಲಿ ನಡೆಯುತ್ತಿದೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು. ಯಾವುದೇ ಕಚೇರಿಗಳಲ್ಲೂ ಲಂಚವಿಲ್ಲದೆ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸಿದರು.
ಗಣಪತಿ ಹೆನಗೆರೆ, ನಾಗರಾಜ್ ಮಜ್ಜಿಗೆರೆ, ಅರುಣ್ ಪೂಜಾರಿ, ಸ್ವಾಮಿಗೌಡ, ಕೃಷ್ಣಮೂರ್ತಿ, ವೆಂಕಟೇಶ್ ಇತರರಿದ್ದರು.