

ಶಿವಮೊಗ್ಗ: ಸಮಾಜದಲ್ಲಿ ನಾಯಕರಾಗಿ ರೂಪುಗೊಳ್ಳಲು ಉತ್ತಮ ಕೌಶಲ, ಪ್ರಬುದ್ಧತೆ, ಸಂಸ್ಕಾರ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಎಟಿಎನ್‌ಸಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ನಮಗೆ ನಾವೇ ನಿಜವಾದ ನಾಯಕರು. ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಜನಪ್ರತಿನಿಧಿಯಾದವರು ಮಾತ್ರ ನಾಯಕರಲ್ಲ. ಕ್ರೀಡೆ, ಚಲನಚಿತ್ರ, ಕುಟುಂಬ ಎಲ್ಲ ಕಡೆಗಳಲ್ಲೂ ನಾಯಕರಿದ್ದಾರೆ ಎಂದರು.
ಎಲ್ಲಿ ಒಳ್ಳೆಯ ಸಂಸಾರವಿದೆಯೋ ಅಲ್ಲಿ ಒಳ್ಳೆಯ ಸಂಸ್ಕಾರವಿರುತ್ತದೆ. ಸಂಸ್ಕಾರದ ತಳಹದಿ ಇರುವುದು ಕುಟುಂಬದಲ್ಲಿ. ನಂತರ ಅದು ಶಿಕ್ಷಣ ಮತ್ತು ಅನುಭವದಿಂದ ಸಿಗುತ್ತದೆ. ಸರಳತೆ, ಸಜ್ಜನಿಕೆ, ಪ್ರಾಮಾಣಿಕ, ಪಾರದರ್ಶಕ, ಸಮಯ ಪಾಲನೆ, ಪ್ರಬುದ್ಧ ಮಾತುಗಾರಿಕೆ ಜತೆಯಲ್ಲಿ ಸಹನೆ ಮತ್ತು ಅಧ್ಯಯನಶೀಲ ಮನೋಭಾವ ಉತ್ತಮ ನಾಯಕತ್ವಕ್ಕೆ ಅತಿ ಮುಖ್ಯ ಎಂದು ತಿಳಿಸಿದರು.
ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಅಧಿಕಾರದ ಹಂಬಲ ಇರಬಾರದು. ನಾಯಕತ್ವ ಎಂದರೆ ಬದ್ಧತೆ ಸಂಕೇತ. ಅಹಂಕಾರ, ಹಣ ದಾಹ, ಸ್ವಹಿತಾಸಕ್ತಿ, ಸ್ವಾರ್ಥ ಪರವಾದ ನಡೆ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ವಿರೋಧಿಗಳನ್ನು ಅವಹೇಳನ ಮಾಡುವ ಗುಣ ನಾಯಕನಿಗೆ ಇರಬಾರದು. ಮನುಷ್ಯನಲ್ಲಿ ಅತಿ ಭಾರವಾದ ವಸ್ತುವೆಂದರೆ ಅದು ಅಹಂಕಾರ. ನಾಯಕ ಹಿಂಬಾಲಕರನ್ನು ಸೃಷ್ಟಿಸಿದೆ ನಾಯಕರನ್ನು ರೂಪಿಸುವ ಶಕ್ತಿ ಹೊಂದಿರಬೇಕು ಎಂದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸೇವೆ ಎನ್ನುವುದು ಒಂದು ದಿನಕ್ಕೆ ಸೀಮಿತವಾದ ಪರಿಕಲ್ಪನೆಯಲ್ಲ. ಗಾಂಧೀಜಿ ಹೇಳಿರುವ ಹಾಗೆ ನಮ್ಮ ಜೀವನದಲ್ಲಿ ಸಾಮಾಜಿಕ ಬದಲಾವಣೆಗೆ ನಿರಂತರ ಶ್ರಮಿಸಿದಾಗ ಮಾತ್ರ ನಿಜವಾದ ಸೇವಾ ಭಾವ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎನ್.ಮಂಜುನಾಥ್, ಸ್ವಯಂ ಸೇವಕರಾದ ಪ್ರಜ್ವಲ್, ಸಿಂಚನಾ, ಪ್ರಿಯಾಂಕಾ, ಇಂದ್ರಸೇನಾ, ರಶ್ಮಿತಾ, ಅದಿತಿ ಇತರರಿದ್ದರು.