

ಬೆಂಗಳೂರು: ಕಾವೇರಿಗಾಗಿ ಇಡೀ ಕರ್ನಾಟಕವೇ ಸಂಘಟಿತವಾಗಿದ್ದರೂ, ಅದರ ಫಲ ರಾಜ್ಯಕ್ಕೆ ದಕ್ಕುತ್ತಿಲ್ಲ. ಇತ್ತ, ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಹೋರಾಟಗಾರರು ಬೀದಿಗಿಳಿದಿದ್ದರೆ ಅತ್ತ, ಕಾವೇರಿ ನಿರ್ವಹಣಾ ಪ್ರಾಧಿಕಾರ ನೀರು ಹರಿಸುವ ಆದೇಶ ಪಾಲಿಸುವಂತೆ ಸೂಚಿಸಿದೆ. ಹೀಗಾಗಿ ರಾಜ್ಯದ ಇಕ್ಕಟ್ಟಿನ ಪರಿಸ್ಥಿತಿ ಮುಂದುವರಿಯು ವಂತಾಗಿದೆ. ಈ ನಡುವೆ, ಸಿಎಂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದು, ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ಜಾರಿಯಲ್ಲಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು ಬಂದ್ನ ಬೆನ್ನಲ್ಲೇ ಶುಕ್ರವಾರ ನಡೆದ ‘ಕರ್ನಾಟಕ ಬಂದ್’ಗೂ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾ ಯಿತು. ಕಾವೇರಿ ಕಣಿವೆಯ ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದ್ದವು.
ಉಳಿದ ಜಿಲ್ಲೆಗಳಲ್ಲೂ ಬಂದ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗುವ ಮುಖೇನ ಕಾವೇರಿ ನೀರಿನ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸಲ್ಲ ಎಂದು ಒಗ್ಗಟ್ಟಿನ ಸಂದೇಶ ರವಾನೆಯಾಗಿದೆ. ಬಂದ್ಗೆ ರಾಜ್ಯಾದ್ಯಂತ ಸಾವಿರಾರು ಸಂಘಟನೆಗಳ ಬೆಂಬಲದ ಜತೆಗೆ ಬಿಜೆಪಿ, ಜೆಡಿಎಸ್, ಸ್ಯಾಂಡಲ್ವುಡ್ ಸಾಥ್ ಕೊಟ್ಟಿತ್ತು. ಹಿರಿಯ ನಟ ಡಾ.ಶಿವರಾಜ್ಕುಮಾರ್ ನೇತೃತ್ವದಲ್ಲಿ ನಟ ದರ್ಶನ್, ದ್ರುವ ಸರ್ಜಾ ಸೇರಿ ಎಲ್ಲ ಹಿರಿಯ-ಕಿರಿಯ ಕಲಾವಿದರು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸಮಾವೇಶಗೊಳ್ಳುವ ಮೂಲಕ ಬಂದ್ನಲ್ಲಿ ಪಾಲ್ಗೊಂಡರು. ಕೆಲ ಜಿಲ್ಲೆಗಳಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮೆರವಣಿಗೆಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಸಿದ್ದು, ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಪ್ರಯಾಣಿಕರಿಲ್ಲದೆ 44 ವಿಮಾನ ರದ್ದು: ವಿಮಾನಯಾನ ಸೇವೆಗೂ ಬಂದ್ ಬಿಸಿ ತಟ್ಟಿತು. ಬೆಂಗಳೂರಿಗೆ ಬರಬೇಕಿದ್ದ ಮತ್ತು ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಹೋಗಬೇಕಿದ್ದ 44 ವಿಮಾನಗಳ ಹಾರಾಟ ರದ್ದಾಯಿತು. ಹೊಸದಿಲ್ಲಿ, ಮುಂಬೈ, ಕೋಲ್ಕತ, ಮಂಗಳೂರು ಸೇರಿ ವಿವಿಧೆಡೆಯಿಂದ ಬರಬೇಕಿದ್ದ 22 ವಿಮಾನಗಳ ಹಾರಾಟ ರದ್ದಾದವು. ಇನ್ನು ಕೆಐಎಎಲ್ನಿಂದ ವಿವಿಧೆಡೆಗೆ ಹೋಗಬೇಕಿದ್ದ 22 ವಿಮಾನಗಳ ಹಾರಾಟ ಸ್ಥಗಿತಗೊಂಡಿತು. ಓಲಾ, ಊಬರ್ ಟ್ಯಾಕ್ಸಿ, ಕ್ಯಾಬ್ ಸಂಚಾರ ಇರಲಿಲ್ಲ. ಮುಂಗಡ ಟಿಕೆಟ್ ಕಾಯ್ದಿರಿಸಿದ್ದರೂ ಟಿಕೆಟ್ ರದ್ದುಪಡಿಸಿ ಪ್ರಯಾಣ ಮೊಟಕುಗೊಳಿಸಿದರು.
ಕೆಐಎಎಲ್ಗೆ ಮುತ್ತಿಗೆ ಯತ್ನ: ಕೆಐಎಎಲ್ ಆವರಣ ಪ್ರವೇಶಿಸಿ ಪ್ರತಿಭಟನೆಗೆ ಮಾಡಲು ಮುಂದಾದ ಕರ್ನಾಟಕ ಸೇನೆಯ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಬೆಳಗ್ಗೆ 9.50ಕ್ಕೆ ನಿರ್ಗಮಿಸಬೇಕಿದ್ದ ಇಂಡಿಗೋ ವಿಮಾನದ ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಹಿಡಿದು ಪ್ರಯಾಣಿಕರಂತೆ ಕೆಐಎಎಲ್ ಆವರಣ ಪ್ರವೇಶಿಸಿ ಪ್ರತಿಭಟನೆ ಮಾಡಲು ಸಜ್ಜಾಗಿದ್ದರು. ಪೊಲೀಸರು ಕೊನೆಯ ಕ್ಷಣದಲ್ಲಿ ಇವರನ್ನು ಬಂಧಿಸಿದ್ದಾರೆ. ವಿಮಾನನಿಲ್ದಾಣದ ದ್ವಾರದ ಬಳಿ ಪ್ರತಿಭಟನೆಗೆ ಮುಂದಾದ ಕರವೇಯವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಸಿಎಂ ಗೃಹ ಕಚೇರಿ ಕೃಷ್ಣಗೆ ಬಿಗಿ ಭದ್ರತೆ: ಕಾವೇರಿ ಕಿಚ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಗೆ ಭದ್ರತೆ ಒದಗಿಸಲಾಗಿತ್ತು. ಅನಿರೀಕ್ಷಿತವಾಗಿ ನುಗ್ಗುವ ಕಾರ್ಯಕರ್ತರನ್ನು ನಿರ್ಬಂಧಿಸಲು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಕ್ರಮವಹಿಸಲಾಗಿತ್ತು. ನಾವು ಕಾವೇರಿಗಾಗಿ ಕರ್ನಾಟಕ ಬಂದ್ ಮಾಡಿದ್ದೇವೆ. ಸರ್ಕಾರ ನಮ್ಮನ್ನೇ ಬಂದ್ ಮಾಡಿದೆ. ತಮಿಳುನಾಡಿನಲ್ಲಿ ಪೊಲೀಸರು ರಸ್ತೆ ತಡೆ ಮಾಡಿ ಅವರ ರಾಜ್ಯ ಅವರ ಪರವಾಗಿ ನಿಂತಿದ್ದಾರೆ. ಆದರೆ, ಕರ್ನಾಟಕದಲ್ಲಿ ಪೊಲೀಸರು ಹೋರಾಟಗಾರರನ್ನೇ ಬಂಧಿಸುತ್ತಿದ್ದಾರೆ ಎಂದು ಮುಖಂಡರಾದ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ ಸೇರಿ ಅನೇಕರನ್ನು ಕಾರಣ ಇಲ್ಲದೆ ಬಂಧಿಸಲಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿ ಅ.5 ಕ್ಕೆ ಕೆಆರ್ಎಸ್ ಚಲೋ ಚಳವಳಿ ನಡೆಸಲಾಗುವುದು ಎಂದು ಕನ್ನಡಪರ ಸಂಘಟ ನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಮೈಸೂರು ಜಿಲ್ಲೆಯ ಪ್ರತಿ ಗ್ರಾಮ, ತಾಲೂಕು, ನಗರಪ್ರದೇಶಕ್ಕೆ ಬಂದ್ನ ಬಿಸಿ ತಟ್ಟಿತು. ಮಂಡ್ಯ ಜಿಲ್ಲಾದ್ಯಂತ ಸಂಘಟನೆಗಳು ಪ್ರತಿಭಟನೆ, ಬೈಕ್ ರ‍್ಯಾಲಿ ನಡೆಸಿದವು. ಹಾಸನದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ತಮಿಳು ಸಂಘ ಬಂದ್ಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಗಮನ ಸೆಳೆಯಿತು. ಧಾರವಾಡ ಜುಬಿಲಿ ವೃತ್ತದಲ್ಲಿ ವಾಹನ ಸಂಚಾರ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಹಾವೇರಿಯಲ್ಲಿ ಕರವೇ ಕಾರ್ಯಕರ್ತರು ಸಿರಿಂಜ್ ಮೂಲಕ ಕೈಯಲ್ಲಿನ ರಕ್ತ ತೆಗೆದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಗದಗದಲ್ಲಿ ಜಯ ಕರ್ನಾಟಕ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಆಕೊ್ರೕಶ ವ್ಯಕ್ತಪಡಿಸಿದರು.
ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಬಂದು ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು. ನಾನು ಧರಿಸಿರುವ ಬಟ್ಟೆ ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಇದು ಮಹಿಳೆಯರ ಗೌರವದ ಸಂಕೇತವೂ ಆಗಿದೆ ಎಂದರು.
ಕರ್ನಾಟಕ ಬಂದ್ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದಿದೆ. ಹೀಗಾಗಿ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
| ಹಿತೇಂದ್ರ ರಾಜ್ಯದ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ