ಧಾರ್ಮಿಕ ಚಿಂತನೆಗಳಿಂದ ಉತ್ತಮ ವ್ಯಕ್ತಿತ್ವ

5-ಎಸ್ಕೆಪಿ-1-ಕಳಸಾರೋಹಣ-ಕಾರ್ಯಕ್ರಮ
ಶಿಕಾರಿಪುರದ ಅಂಬಾರಗೊಪ್ಪದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಿ.ವೈ.ವಿಜಯೇಂದ್ರ, ಕೆ.ಎಸ್.ಗುರುಮೂರ್ತಿ ಇತರರಿದ್ದರು.
Published on

ಶಿಕಾರಿಪುರ: ಧಾರ್ಮಿಕ ಚಿಂತನೆಗಳಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸದ್ವಿಚಾರಗಳು ಮನುಷ್ಯನಲ್ಲಿ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಅಂಬಾರಗೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಗೋಪುರ ಉದ್ಘಾಟನೆ, ಕಳಸ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನಗಳು ನಮ್ಮ ಶ್ರದ್ಧಾಕೇಂದ್ರಗಳು. ಧಾರ್ಮಿಕ ಕಾರ್ಯ, ಪೂಜೆಗಳಿಂದ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.

ಹಿರಿಯರು ದೇವಾಲಯಗಳನ್ನು ಸ್ಥಾಪಿಸಿ ಮಳೆ ಬೆಳೆಗಾಗಿ ಪ್ರಾರ್ಥಿಸುತ್ತಿದ್ದರು. ಗ್ರಾಮಗಳಲ್ಲಿ ಸಂಪ್ರದಾಯ, ಆಚರಣೆಗಳನ್ನು ಪಾಲಿಸಲು ಮಾರ್ಗದರ್ಶನ ನೀಡುತ್ತಿದ್ದರು. ಹಿರಿಯರು ನೀಡಿದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.

ಕಾಳೇನಹಳ್ಳಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಒಂದು ಮಂದಿರ ಎಂದರೆ ಅದು ಪಾವಿತ್ರೃದ ಸಾಕ್ಷಿರೂಪ. ಅಧ್ಯಾತ್ಮ ಚಿಂತನೆಯ ಜನ್ಮಭೂಮಿ. ಅಲ್ಲಿ ಭಗವಂತನ ಸಾನ್ನಿಧ್ಯ ಇರುತ್ತದೆ. ನಾವು ಮಂದಿರದಲ್ಲಿ ಅವನ ಸಾಮೀಪ್ಯ ತಲುಪಿದಾಗ ಪಾಪಗಳಿಂದ ಮುಕ್ತರಾಗುತ್ತೇವೆ. ಸೃಷ್ಟಿಯಲ್ಲಿ ಭಗವಂತನ ಅವಾಹನೆಯಿದೆ. ಆದ್ದರಿಂದ ಪ್ರಕೃತಿ ನಮಗೆ ಸದಾ ಪೂಜನೀಯ ಎಂದು ಹೇಳಿದರು.

ಅಂಬಾರಗೊಪ್ಪ ಭಕ್ತರ ಆಶಯದಂತೆ ಶ್ರೀ ಆಂಜನೇಯ ಸ್ವಾಮಿ ದೇವಳದ ಗೋಪುರ ಉದ್ಘಾಟನೆ, ಕಳಸಾರೋಹಣವಾಗುತ್ತಿದೆ. ಧರ್ಮಪಥ ಎಂದರೆ ಅದು ಅಕ್ಷರಶಃ ರಾಜಪಥ. ನಾವು ಧರ್ಮ ಮಾರ್ಗ ಆಯ್ಕೆ ಮಾಡಿಕೊಂಡು ಮುನ್ನಡೆಯಬೇಕು. ಇದರಿಂದ ಅಧರ್ಮದ ಅಟ್ಟಹಾಸ ನಿಲ್ಲುತ್ತದೆ. ಸಾತ್ವಿಕ ಚಿಂತನೆಗಳು ಎಲ್ಲೆಡೆ ಹರಡುತ್ತವೆ ಎಂದು ತಿಳಿಸಿದರು.

ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳಿಗಾರ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಶೇಖರಪ್ಪ, ಮಲ್ಲೇಶಪ್ಪ, ಸಣ್ಣಪ್ಪ ಮತ್ತು ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net