ಎಲ್​ಪಿಜಿ ಗ್ರಾಹಕರಿಗೆ ಸಿಹಿಸುದ್ದಿ : ಸಿಲಿಂಡರ್​ಗಾಗಿ ಕಾಯುವ ಪಾಡು ತಪ್ಪಲಿದೆ

gas
Published on

ನವದೆಹಲಿ: ಅಡುಗೆ ಗ್ಯಾಸ್​ ಸಿಲಿಂಡರ್ ಬುಕ್ ಮಾಡಿ ಹಲವು ದಿನಗಳು ಕಳೆದರೂ ಬಾರದಿರುವುದು ಬಡ ಮತ್ತು ಮಧ್ಯಮ ವರ್ಗದವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯಾಗಿಬಿಟ್ಟಿದೆ. ಆದರೆ ಈ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಒದಗಲಿದೆ. ಸಿಲಿಂಡರ್​​ನ ಸ್ಟಾಕ್ ಇಲ್ಲದೆಯೋ, ಹೆಚ್ಚು ಆರ್ಡರ್ ಇರುವುದರಿಂದಲೋ ನಿಮ್ಮ ಡಿಸ್ಟ್ರಿಬ್ಯೂಟರ್ ತಕ್ಷಣ ನಿಮಗೆ ಗ್ಯಾಸ್ ಸಿಲಿಂಡರ್ ಒದಗಿಸಲು ಸಾಧ್ಯವಿಲ್ಲ ಎಂದರೆ, ಮನೆಯ ಬಳಿಯ ಬೇರೆ ಡೀಲರ್​ಗಳಿಂದ ಸಿಲಿಂಡರ್ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

ಹೌದು, ಈ ನಿಟ್ಟಿನಲ್ಲಿ ಏಕೀಕೃತ ಸಾಫ್ಟ್​ವೇರ್​ ಆಧರಿಸಿದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇನ್ನು ಮುಂದೆ ನಗರ ಪ್ರದೇಶಗಳಲ್ಲಿ ಅಡುಗೆಗಾಗಿ ಎಲ್​ಪಿಜಿ ಬಳಸುವ ಗ್ರಾಹಕರು, ರೀಫಿಲ್ ಬುಕ್ ಮಾಡಲು ತಮ್ಮ ಮನೆಯ ಸಮೀಪದಲ್ಲಿರುವ ಯಾವುದೇ ಮೂರು ಡೀಲರ್​ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಲಿದ್ದಾರೆ ಎಂದು ಕೇಂದ್ರ ಸರ್ಕಾರದ ತೈಲ ಸಚಿವಾಲಯ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.

ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಹೊಸದಾಗಿ ರೂಪಿಸಲಾಗುವ ಏಕೀಕೃತ ಸಾಫ್ಟ್‌ವೇರ್ ಮೂಲಕ, ಅಂತರ್-ಕಂಪನಿಯ ವಲಸೆ ಕೂಡ ಸುಲಭವಾಗುತ್ತದೆ. ಜೊತೆಗೆ ಹೊಸ ಸಂಪರ್ಕಗಳನ್ನು ಕಡಿಮೆ ದಾಖಲಾತಿಗಳ ಮೇಲೆ ಶೀಘ್ರವಾಗಿ ಪಡೆಯುವ ಅವಕಾಶವಿರುತ್ತದೆ ಎಂದು ಕಪೂರ್ ಹೇಳಿದ್ದಾರೆ.

1 ಕೋಟಿ ಹೊಸ ಸಂಪರ್ಕ : ಮೋದಿ ಸರ್ಕಾರದ ವಿಶೇಷ ಸಾಧನೆಗಳಲ್ಲೊಂದು ಎಂದರೆ ಬಡ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕಗಳನ್ನು ಕಲ್ಪಿಸಿದ್ದು. ಮಹಿಳೆಯರಿಗೆ ಸೌದೆ ಒಲೆಗಳ ಮುಂದೆ ಹೊಗೆ ಕುಡಿಯುತ್ತ ಅಡುಗೆ ಮಾಡುವ ಪಾಡಿನಿಂದ ಮುಕ್ತಿ ನೀಡಲು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಸಹಾಯಕವಾಗಿದೆ. ಉಜ್ವಲಾ ಯೋಜನೆಯಿಂದಾಗಿ ಭಾರತದಲ್ಲಿ ಈಗಾಗಲೇ 29 ಕೋಟಿ ಮನೆಗಳಿಗೆ ಅಡುಗೆ ಅನಿಲ ಲಭ್ಯವಾಗಿದೆ. ಇದೀಗ ಬಿಟ್ಟುಹೋಗಿರುವ ಕುಟುಂಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಹೊಸದಾಗಿ ಒಂದು ಕೋಟಿ ಉಚಿತ ಎಲ್​ಪಿಜಿ ಕನೆಕ್ಷನ್​ಗಳನ್ನು ಒದಗಿಸಲಾಗುವುದು. ತನ್ಮೂಲಕ ಶೇ. 100 ರಷ್ಟು ಶುದ್ಧ ಅನಿಲದ ಸೌಲಭ್ಯವನ್ನು ದೇಶದಾದ್ಯಂತ ಕಲ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕಪೂರ್ ಹೇಳಿದ್ದಾರೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net