

ಟ್ರಂಪ್ ಕದನ ವಿರಾಮ ಎಫೆಕ್ಟ್ | ವಿದೇಶಿ ಮಾರುಕಟ್ಟೆಗಳಲ್ಲಿ ಮಂದಗತಿ
ಮುಂಬೈ: ಪರಸ್ಪರ ತೆರಿಗೆ ಜಾರಿಯನ್ನು 90 ದಿನ ಮುಂದೂಡಿದ ಅಮೆರಿಕದ ಕ್ರಮದಿಂದಾಗಿ ಬ್ಯಾಂಕಿಂಗ್, ತೈಲ, ಲೋಹ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಭಾರತೀಯ ಷೇರುಪೇಟೆಗೆ ಶುಕ್ರವಾರ ಶುಕ್ರದೆಸೆ ಬಂದಿತ್ತು. ದಿನದ ವಹಿವಾಟಿನ ನಡುವೆ 1,620 ಅಂಕ ಏರಿಕೆಯಾಗಿ 75,467ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 1,310 ಅಂಕ ಏರಿಕೆ ದಾಖಲಿಸಿ 75,177ಕ್ಕೆ ಸ್ಥಿರವಾಯಿತು. ನಿಫ್ಟಿ ಕೂಡ ದಿನದ ವಹಿವಾಟಿನ ಮಧ್ಯೆ 524 ಅಂಕ ಹೆಚ್ಚಳವಾಗಿ 22,923ಕ್ಕೆ ತಲುಪಿತ್ತು. ಕೊನೆಯಲ್ಲಿ 429 ಅಂಕ ಏರಿಕೆ ದಾಖಲಿಸಿ 22,828ಕ್ಕೆ ಸ್ಥಿರವಾಯಿತು.
ಟಾಟಾ ಸ್ಟೀಲ್ ಷೇರು ದರ ಶೇ. 4.9ರಷ್ಟು ಹೆಚ್ಚಾಗಿತ್ತು. ಎಚ್ಡಿಎಫ್ಸಿ ಬ್ಯಾಂಕ್ ಷೇರು ಬೆಲೆ ಶೇ. 2.33ರಷ್ಟು ಏರಿತ್ತು. ಸೋಮವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ರಜೆ ಇರಲಿದೆ.
ಜಾಗತಿಕ ಮಾರುಕಟ್ಟೆ ಸ್ಥಿತಿಗತಿ: ಚೀನಾ ಮತ್ತು ಅಮೆರಿಕ ಮಧ್ಯೆ ತೆರಿಗೆ ಸಮರ ಮುಂದುವರಿದಿರುವ ಕಾರಣ ಜಾಗತಿಕ ಮಾರುಕಟ್ಟೆಗಳು ಇಳಿಮುಖವಾಗಿದ್ದವು. ಟೋಕಿಯೋ, ದಕ್ಷಿಣ ಕೊರಿಯಾ ಮತ್ತು ಯೂರೋಪಿಯನ್ ಒಕ್ಕೂಟದ ಷೇರು ಮಾರುಕಟ್ಟೆಗಳು ಇಳಿಕೆ ದಾಖಲಿಸಿದವು. ಶಾಂಘೈ, ಹಾಂಗ್ಕಾಂಗ್ ಸೂಚ್ಯಂಕಗಳಲ್ಲಿ ಏರುಗತಿ ಕಂಡುಬಂತು. ಅಮೆರಿಕದ ಮಾರುಕಟ್ಟೆಯೂ ಗುರುವಾರ ತೀವ್ರ ಇಳಿಕೆಗೆ ಸಾಕ್ಷಿಯಾಯಿತು. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಶೇ. 0.32ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್ಗೆ 63.53 ಡಾಲರ್ಗೆ ತಲುಪಿತು.
ಮುಂಬೈ: ಅಮೆರಿಕದ ಡಾಲರ್ನಲ್ಲಿ ತೀಕ್ಷ್ಣ ತಿದ್ದುಪಡಿ ಮತ್ತು ದೇಶೀಯ ಮಾರುಕಟ್ಟೆಯ ಬಲವಾದ ಚೇತರಿಕೆಯಿಂದಾಗಿ ಶುಕ್ರವಾರ ರೂಪಾಯಿಯ ಮೌಲ್ಯವು 58 ಪೈಸೆಯಷ್ಟು ಏರಿಕೆಯಾಗಿ 86.10ಕ್ಕೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲಿನ ತಮ್ಮ ಶೇ. 26ರಷ್ಟು ‘ಪರಸ್ಪರ ತೆರಿಗೆ’ ಪ್ರಸ್ತಾವವನ್ನು 90 ದಿನಗಳ ಕಾಲ ತಡೆಹಿಡಿದಿದ್ದು ರೂಪಾಯಿ ಬೆಲೆ ಏರಿಕೆಗೆ ಇಂಬು ನೀಡಿದೆ. ಬುಧವಾರ ಅಮೆರಿಕನ್ ಡಾಲರ್ ಎದುರು ರೂಪಾಯಿಯ ಬೆಲೆ 86.68 ಇತ್ತು.