ಗ್ರಾಮೀಣರಿಗೆ ಸರ್ಕಾರ ಸಿಹಿ: ಗಡಿಯಾಚೆಗಿನ ಮನೆಗಳೂ ಇನ್ನು ಇ-ಸ್ವತ್ತು ವ್ಯಾಪ್ತಿಗೆ

Front
Published on

| ಶಿವಾನಂದ ತಗಡೂರು/ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಹಳ್ಳಿಯಲ್ಲಿದ್ದರೂ ‘ಲೆಕ್ಕಕ್ಕಿಲ್ಲ’ದಂತಾಗಿದ್ದ ಮನೆಗಳಿಗೂ ಇನ್ನು ‘ಅಧಿಕೃತ’ ಮುದ್ರೆ ಬೀಳಲಿದೆ. ಗ್ರಾಮ ಠಾಣಾ ಗಡಿದಾಟಿ ಕಟ್ಟಿಕೊಂಡಿರುವ ಮನೆಗಳಿಗೆ ಇ-ಸ್ವತ್ತು ಅನ್ವಯ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್​ಡಿಪಿಆರ್) ಇಲಾಖೆ ಮುಂದಾಗಿದೆ. ಇದರಿಂದ ಲಕ್ಷಾಂತರ ಮನೆಗಳು ಅಧಿಕೃತವಾಗಿ ಸರ್ಕಾರಕ್ಕೆ ತೆರಿಗೆ ಆದಾಯ ಹೆಚ್ಚಲಿದೆ.

ಹಲವು ವರ್ಷಗಳಿಂದ ಮನೆ ನಿರ್ವಿುಸಿಕೊಂಡು ನೆಲೆಸಿದ್ದರೂ ಖಾತೆ ಸಿಗದೆ ಹಳ್ಳಿ ಜನರು ಸಂಕಷ್ಟಕ್ಕೆ ಸಲುಕಿದ್ದರು. ಈ ನಿಟ್ಟಿನಲ್ಲಿ ಗ್ರಾಮ ಠಾಣಾ ಪರಿವ್ಯಾಪ್ತಿಯ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿದೆ. ಗ್ರಾಮ ಠಾಣಾ ಗಡಿ ಮರುಸರ್ವೆ ನಡೆಸಿ ಗಡಿಯಾಚೆಗಿನ ಮನೆಗಳು ಒಳಗೊಂಡಂತೆ ಗ್ರಾಮ ಎಂದು ಅಧಿಕೃತ ಮುದ್ರೆ ಒತ್ತಿ ಇ-ಸ್ವತ್ತು ನೀಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ 5,962 ಗ್ರಾಮ ಪಂಚಾಯಿತಿಗಳಿವೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಊರುಗಳು ಇದ್ದು, ಲಕ್ಷಾಂತರ ಮನೆ ನಿರ್ವಣವಾಗಿವೆ. ಈ ಗ್ರಾಮಗಳ ಸರ್ವೆ ಮತ್ತು ನೋಂದಣಿ ಅಂದಾಜು 1950ರಲ್ಲೇ ನಡೆದಿದೆ. ಆನಂತರ ಸರ್ವೆ ನಡೆದಿಲ್ಲ. ಕ್ರಮೇಣ ಅವಿಭಕ್ತ ಕುಟುಂಬಗಳು ವಿಭಕ್ತವಾಗಿ ಒಂದು ಮನೆಯಿಂದ ನಾಲ್ಕೈದು ಹೊಸ ಮನೆ ನಿರ್ವಣವಾಗಿವೆ. ಕಳೆದ 70 ವರ್ಷಗಳಿಂದ ಲಕ್ಷಾಂತರ ಸೂರುಗಳು ತಲೆ ಎತ್ತಿವೆ. ಗ್ರಾಮ ಠಾಣಾ ಗಡಿಯಿಂದ ಹೊರಬಂದು ತೋಟ ಮತ್ತು ತಮ್ಮ ಒಡೆತನದ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಇಂತಹ ಮನೆಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಖಾತಾ ಸಿಗುತ್ತಿಲ್ಲ. ಪರಿಣಾಮ ಸರ್ಕಾರದ ದಾಖಲೆಗಳಲ್ಲಿ ಮನೆಗಳ ಉಲ್ಲೇಖ ಇಲ್ಲದೆ ಆರ್​ಡಿಪಿಆರ್, ಕಂದಾಯ ಇಲಾಖೆ, ಇಂಧನ ಮತ್ತು ಸಾರಿಗೆ ಇಲಾಖೆಗೂ ಮಾಹಿತಿ ಸಿಗದೆ ಮೂಲಸೌಕರ್ಯದಿಂದ ವಂಚಿತವಾಗುತ್ತಿವೆ. ಹಲವು ವರ್ಷಗಳಿಂದ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದ ಗ್ರಾಮ ಠಾಣಾ ಸರಹದ್ದು ವಿಷಯಕ್ಕೆ ತೆರೆ ಎಳೆಯಲು ಸರ್ಕಾರ ನಿರ್ಧರಿಸಿ ಕಾನೂನು, ನಗರಾಭಿವೃದ್ಧಿ ಮತ್ತು ಆರ್​ಡಿಪಿಆರ್ ಇಲಾಖೆ ಸಚಿವರನ್ನು ಒಳಗೊಂಡ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ.

ಗ್ರಾಮ ಠಾಣಾ ವ್ಯಾಪ್ತಿ ಮೀರಿ ನಿರ್ಮಾಣ ಆಗಿರುವ ಆಸ್ತಿಗಳಿಗೂ ಇ-ಸ್ವತ್ತು ಮೂಲಕ 11ಎ ಖಾತಾ ಹಕ್ಕು ಪತ್ರ ವಿತರಿಸುವ ಸಂಬಂಧ ಪ್ರಸ್ತುತ ನಿಯಮವನ್ನು ಸರಳೀಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಕ್ಕೆ ತಿದ್ದುಪಡಿ ಪ್ರಸ್ತಾವನೆ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದೆ. ಶೀಘ್ರದಲ್ಲೇ ಅನುಮೋದನೆ ಸಿಗುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮ ಠಾಣೇತರ ವ್ಯತ್ಯಾಸವನ್ನು ಬಹುತೇಕ ತೆಗೆದು ಹಾಕಲು ಇ-ಸ್ವತ್ತಿಗೆ ತಿದ್ದುಪಡಿ ತರುವುದು ಅಗತ್ಯವಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ ನಗರ ಸಂಸ್ಥೆಗಳ ಅನುಮೋದಿತ ಯೋಜನೆಗಳಿದ್ದರೆ, ಅಂತಹ ಆಸ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಆಸ್ತಿಗಳನ್ನು ‘ಇ-ಸ್ವತ್ತು’ವಿನೊಳಗೆ ತರಲಾಗುತ್ತಿದೆ.

ಸಮಸ್ಯೆಗೆ ಪರಿಹಾರ: ಗ್ರಾಮ ಠಾಣಾ ವ್ಯಾಪ್ತಿಯಿಂದ ಹೊರಗೆ ಮನೆ ನಿರ್ಮಾಣ ಮಾಡಿದ್ದರೂ ಅವರಿಗೆ ಇ-ಸ್ವತ್ತು ಮಾಡಿಕೊಡಬೇಕು. ಸರ್ಕಾರದಿಂದ ಲಭ್ಯವಾಗುವ ಕುಡಿಯುವ ನೀರು, ಚರಂಡಿ ಸೌಲಭ್ಯ, ರಸ್ತೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ನೀಡಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.

ಇನ್ನೊಂದು ಸಭೆ: ಈಗಾಗಲೆ ಈ ತಿದ್ದುಪಡಿ ಕಾಯ್ದೆಗೆ ಅಂತಿಮ ರೂಪ ನೀಡಲಾಗಿದೆ. ಇನ್ನೊಂದು ಸಭೆ ಬಾಕಿ ಇದೆ. ಗ್ರಾಮೀಣಾಭಿವೃದ್ಧಿ ಸಚಿವರು ರಾಜೀನಾಮೆ ನೀಡಿದ್ದರಿಂದ ಮತ್ತೊಬ್ಬ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಸಂಪುಟಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ.

ಗ್ರಾಮ ಠಾಣಾ ಸಮಸ್ಯೆ ಬಗೆಹರಿಸಲು ಸಂಪುಟ ಉಪ ಸಮಿತಿ ಸಭೆ ನಡೆಸಿ ತೀರ್ವನಕ್ಕೆ ಬಂದಿದೆ. ಗ್ರಾಮ ಠಾಣಾ ಗಡಿಯಿಂದ ಹೊರಗಿನ ಮನೆಗಳಿಗೂ ಇ-ಖಾತಾ ನೀಡಲು ತಿದ್ದುಪಡಿ ತರಲಾಗುತ್ತಿದೆ. | ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ಇಲಾಖೆ

ಸಾರ್ವಜನಿಕರ ಆಸ್ತಿ ಭದ್ರ: ಇ-ಸ್ವತ್ತು ಅನ್ವಯ ಸಾರ್ವಜನಿಕರ ಸ್ಥಿರಾಸ್ತಿಗೆ ಇ-ಖಾತಾ ನೀಡಿದರೆ ಅವರ ಆಸ್ತಿಗಳ ಅತಿಕ್ರಮಣ ತಪ್ಪಲಿದೆ. ಜಮೀನು ಮತ್ತು ತೋಟದಲ್ಲಿ ಕಟ್ಟಿರುವ ಮನೆಗಳಿಗೆ ಡೋರ್ ನಂಬರ್ ಸಿಗಲಿದೆ. ರಾಜ ಕಾಲುವೆ, ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ಖಾತರಿ ಮಾಡಿಕೊಂಡು ಇ-ಸ್ವತ್ತು ಕೊಡುವುದರಿಂದ ಭೂಗಳ್ಳತನ ತಪ್ಪಲಿದೆ. ಸಾರ್ವಜನಿಕರಿಗೂ ಆಸ್ತಿಗೆ ದಾಖಲೆ ಸಿಕ್ಕಂತೆ ಆಗಲಿದೆ. ಎಲ್ಲಕ್ಕೂ ಮುಖ್ಯವಾಗಿ ಒಂದೇ ಸೈಟನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡುವುದು ತಪ್ಪಲಿದೆ.

150 ಗ್ರಾಪಂ ಹೊರಕ್ಕೆ: ಬೆಂಗಳೂರು ಸೇರಿದಂತೆ ಕೆಲ ನಗರಗಳಿಗೆ ಹೊಂದಿಕೊಂಡಂತೆ ಇರುವ ಭೂಮಿಗೆ ಭಾರಿ ಬೆಲೆ ಇದೆ. ಆ ಭೂಮಿ ಗ್ರಾ.ಪಂ ವ್ಯಾಪ್ತಿಯಲ್ಲಿವೆ. ಇಂತಹ ಸಮಸ್ಯೆಗಳಿರುವ 150 ಗ್ರಾಪಂಗಳನ್ನು ಕಾಯ್ದೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಪ್ರಾಧಿಕಾರಗಳ ವ್ಯಾಪ್ತಿ ಇಲ್ಲ: ಬೆಂಗಳೂರು ಸುತ್ತಲಿನ ಅಭಿವೃದ್ಧಿ ಪ್ರಾಧಿಕಾರಗಳನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ನಗರಾಭಿವೃದ್ಧಿ ವ್ಯಾಪ್ತಿಯ ಭೂಪ್ರದೇಶಕ್ಕೆ ಈ ಕಾನೂನು ಅನ್ವಯಿಸದಂತೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗಿದೆ. ಬಿಎಂಆರ್​ಡಿ ಸೇರಿದಂತೆ ಹಲವು ಯೋಜನಾ ಪ್ರಾಧಿಕಾರಗಳನ್ನು ಇದರಿಂದ ಕೈ ಬಿಡಲಾಗಿದೆ.

ಪಂಚಾಯಿತಿಗಳಿಗೂ ಸಿಗಲಿದೆ ಆದಾಯ: ಗ್ರಾಮ ಠಾಣಾಯೇತರ ಆಸ್ತಿಗಳ ಸಂಖ್ಯೆ ದುಪ್ಪಟ್ಟು ಇದೆ. ಈ ಎಲ್ಲರಿಗೂ ವಿದ್ಯುತ್, ಚರಂಡಿ, ರಸ್ತೆ, ಕುಡಿಯುವ ನೀರು ಒದಗಿಸಲಾಗಿದೆ. ಅವರಿಂದ ತೆರಿಗೆ ಸಂಗ್ರಹದಲ್ಲಿ ಗ್ರಾಮ ಪಂಚಾಯಿತಿಗಳು ಹಿಂದೆ ಉಳಿದಿವೆ. ತೆರಿಗೆ ಸಂಗ್ರಹಕ್ಕೆ ಸೂಕ್ತ ದಾಖಲೆಗಳು ಇಲ್ಲ. ಅದಕ್ಕಾಗಿ ಇ-ಸ್ವತ್ತಿನಲ್ಲಿ 11ಎ ಖಾತಾ ಮಾದರಿ ಎಲ್ಲರಿಗೂ ಖಾತೆ ನೀಡಿದರೆ ಆಯಾ ಪಂಚಾಯಿತಿ ವ್ಯಾಪ್ತಿಯ ಆಸ್ತಿಯ ವಿವರ ಸಿಗಲಿದೆ. ಸ್ಥಿರಾಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹ ಮಾಡಲು ಅನುಕೂಲವಾಗಲಿದ್ದು, ಪಂಚಾಯಿತಿ ಆರ್ಥಿಕವಾಗಿ ಬಲಿಷ್ಠವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net