

ನವದೆಹಲಿ: ಕರೊನಾ ಸೋಂಕಿನ ಹಾವಳಿಯ ಬೇಸರದ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಸಿಹಿಸುದ್ದಿ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೌಕರರಿಗೆ ಈ ಸಂತಸದ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಲೀವ್ ಟ್ರಾವೆಲ್ ಕನ್ಷೆಷನ್ (ಎಲ್ಟಿಸಿ) ಯೋಜನೆಯನ್ನು 2022ರ ಸೆಪ್ಟೆಂಬರ್ ವರೆಗೂ ವಿಸ್ತರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.
ಈ ಯೋಜನೆ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಜಮ್ಮು-ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಈಶಾನ್ಯ ರಾಜ್ಯಗಳಿಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಸೆಂಟ್ರಲ್ ಸಿವಿಲ್ ಸರ್ವಿಸಸ್ (ಎಲ್ಟಿಸಿ) ರೂಲ್ಸ್ 1988 ಅನ್ವಯ ಇದನ್ನು ಇನ್ನು ಎರಡು ವರ್ಷಗಳ ಕಾಲ ಎಂದರೆ 2022ರ ಸೆ. 25ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸರ್ಕಾರದ ಏರ್ ಇಂಡಿಯಾ ಮಾತ್ರವಲ್ಲದೆ ಖಾಸಗಿ ವಿಮಾನಗಳ ಮೂಲಕವೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪ್ರದೇಶಗಳನ್ನೇ ಊರಾಗಿ ಅಥವಾ ಕಾರ್ಯಸ್ಥಾನವಾಗಿ ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ ಎಂಬುದಾಗಿ ಸಚಿವರು ತಿಳಿಸಿದ್ದಾರೆ. (ಏಜೆನ್ಸೀಸ್)