

ತೀರ್ಥಹಳ್ಳಿ: ವಿಶ್ವ ಮಾನವ ಸಂದೇಶವನ್ನು ಸಾರಿದ ಕವಿ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಸಮಷ್ಟಿ ರೂಪದಲ್ಲಿ ಕಟ್ಟಿಕೊಡುವುದು ಅಸಾಧ್ಯ. ಬಹುಮುಖಿ ವ್ಯಕ್ತಿತ್ವದಿಂದಲೇ ಅವರ ಗುರಿ ಮತ್ತು ಸ್ಪಷ್ಟತೆ ವಿಶ್ಲೇಷಿಸಬೇಕು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಕುವೆಂಪು ಅವರ 120ನೇ ಜನ್ಮದಿನದ ಅಂಗವಾಗಿ ಕುಪ್ಪಳಿಯ ಹೇಮಾಂಗಣದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆರಿಯಾರ್ ಆರಂಭಿಸಿದ ಜನಪರ ಚಳವಳಿ ನಂತರದಲ್ಲಿ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಕುವೆಂಪು ಯಾವುದೇ ಚಳವಳಿ ಮಾಡಿಲ್ಲವಾದರೂ ಅವರ ಸಾಹಿತ್ಯದಲ್ಲಿ ವಿಶಿಷ್ಟವಾದ ಮತ್ತು ಸದಾಕಾಲ ಸಮಾಜ ಗುರುತಿಸುವ ಚಳವಳಿ ಇದೆ ಎಂದು ಹೇಳಿದರು.
ದೇಶದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೂ ಆಡಳಿತ ಜನಪರವಾಗಿ ಇರುವುದಿಲ್ಲ. ಅದು ದೇಶದ ಹಳೆಯ ಆಡಳಿತ ಸಂಸ್ಕೃತಿಗೆ ಹೊಂದಿಕೊಂಡಿರುತ್ತದೆ ಎಂಬ ಅವರ ಮಾತು ಈಗ ಸತ್ಯವೆನಿಸುತ್ತಿದೆ. ಹೀಗಾಗಿ ಕವಿಯ ಸಮಗ್ರ ಸಾಹಿತ್ಯವನ್ನು ಬಹುಮುಖಿ ವ್ಯಕ್ತಿತ್ವದಿಂದಲೇ ವಿಶ್ಲೇಷಿಸಬೇಕು. ರಾಮಾಯಣ ದರ್ಶನಂ ಕೃತಿಯಲ್ಲಿ ಅವರು ಪಾಲಿಸಿದ ತತ್ವ, ಆದರ್ಶಕ್ಕೆ ತಕ್ಕಂತೆ ಸಾತ್ವಿಕ ಮಾರ್ಗದಿಂದ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜನಮನದ ಅಭಿಪ್ರಾಯಕ್ಕೆ ಹೊಂದಿಕೆ ಆಗುವಂತೆಯೇ ಅವರು ಬದುಕಿದ್ದರು ಎಂದು ಅಭಿಪ್ರಾಯಪಟ್ಟರು.
ನವೋದಯ ಕಾಲಘಟ್ಟದಲ್ಲಿ ಸಾಹಿತ್ಯ ರಚನೆ, ಕಲೆ, ರಮ್ಯತೆ ಎಂದು ಹೊಗಳುತ್ತಿದ್ದವರಿಗೆ ನನ್ನ ಕೃತಿ ಕೃತಿಯಲ್ಲ. ನಾನು ಕವಿಯೂ ಅಲ್ಲ ಎಂದು ಹೇಳುತ್ತಿದ್ದರು. ಪುರೋಹಿತಶಾಹಿತ್ವದ ವಿರುದ್ಧ ನವೋದಯದ ಮೂಲಕ ಸಾಹಿತ್ಯಕ್ಕೆ ಹೊಸ ದಿಕ್ಕು ಮತ್ತು ರೂಪವನ್ನು ಕೊಟ್ಟಿದ್ದರು. ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕುವೆಂಪು ಕಟಿಬದ್ಧರಾಗಿದ್ದರು ಎಂದರು.
ಬೆಂಗಳೂರಿನ ವಿಶ್ವಮಾನವ ವೇದಿಕೆ ಅಧ್ಯಕ್ಷ ಜಿ.ಟಿ.ನರೇಂದ್ರ, ಕುವೆಂಪು ಸಾಹಿತ್ಯ ಶಿಬಿರದ ನಿರ್ದೇಶಕ ರಂಗನಾಥ್, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್, ಪ್ರತಿಷ್ಠಾನದ ನಿರ್ದೇಶಕರಾದ ಎಂ.ಸಿ.ನರೇಂದ್ರ, ಎಸ್.ದಯಾನಂದ್, ಶಿವಾನಂದ ಕರ್ಕಿ, ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಉಮೇಶ್ ಹಾಲಾಡಿ, ಕೊಳಾವರ ನಾರಾಯಣಮೂರ್ತಿ ಇದ್ದರು.