

ತ್ಯಾಗರ್ತಿ: ಆಧುನೀಕರಣದ ಸೋಗಿನಲ್ಲಿ ನಮ್ಮತನವನ್ನು ಕಳೆದುಕೊಂಡರೆ ನೆಮ್ಮದಿ ಹುಡುಕಲು ಸಾಧ್ಯವಿಲ್ಲ ಎಂದು ಸರ್ವಕ್ಷೇಮ ಆಸ್ಪತ್ರೆ ಸಂಶೋಧನಾ ಪ್ರತಿಷ್ಠಾನದ ವೈದ್ಯ ಮಾಧವ ಪೈ ಹೇಳಿದರು.
ಸಾಗರ ತಾಲೂಕಿನ ವರದಾಮೂಲದ ಸಭಾಭವನದಲ್ಲಿ ವಿವೇಕ ಜಾಗೃತ ಬಳಗ ಸಾಗರ, ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ, ಸರ್ವಕ್ಷೇಮ ಆಸ್ಪತ್ರೆ, ಸಂಶೋಧನಾ ಪ್ರತಿಷ್ಠಾನ ಯೋಗಬನ ಮೂಡಗಿಳಿಯಾರು ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಯೋಗಾರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರಲ್ಲಿ 30 ವರ್ಷಗಳ ನಂತರ ದೇಹದ ಬೆಳವಣಿಗೆಯಲ್ಲಿ ಬದಲಾವಣೆ ಆಗುತ್ತದೆ. ಅದರಂತೆ ಅಹಾರ ಪದ್ಧತಿಯೂ ಬದಲಾಗಬೇಕು. ನಿಯಮಿತವಾಗಿ ಉಪವಾಸ, ಸಾತ್ವಿಕ ಆಹಾರ, ಕರ್ತವ್ಯ ಪ್ರಜ್ಞೆ, ಸುಪ್ತ ಮನಸ್ಸು, ಪ್ರಾಮಾಣಿಕ ಸೇವೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಉತ್ತಮ ಜೀವನ ಕ್ರಮವನ್ನು ಅನುಸರಿಸಿ ಜ್ಞಾನವನ್ನು ಹಂಚಿಕೊಳ್ಳಬೇಕು. ಇತ್ತೀಚೆಗೆ ಹಣದ ಹಿಂದೆ ಬಿದ್ದಿರುವುದರಿಂದ ಜೀವನ ಶೈಲಿಯಲ್ಲಿ ಬದಲಾವಣೆ ಆಗಿದೆ ಎಂದರು.
ವಿವೇಕ ಜಾಗೃತ ಬಳಗದ ಪ್ರಮುಖ ಎಚ್.ಶಿವಪ್ಪ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ಇಟ್ಟುಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಎಲ್ಲರೂ ಸಂತೋಷದಿಂದ ಇರಬೇಕು ಎಂದು ತಿಳಿಸಿದರು
ವಿವೇಕ ಜಾಗೃತ ಬಳಗದ ಅಧ್ಯಕ್ಷ ಎನ್.ಕೆ.ಗಣಪತಿ, ಪ್ರಮುಖರಾದ ಭಾಗ್ಯಾ ದೀಕ್ಷಿತ್, ಶಾಂತಿ ಹೆಗಡೆ, ರವೀಂದ್ರ, ಪರಶುರಾಮ, ಚಂದ್ರಶೇಖರ, ಸ್ಮಿತಾ, ಗುರುದತ್ತ ಶರ್ಮ ಇತರರಿದ್ದರು.