

ಕೋಲಾರ: ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ್ ಹೊಂಗಲ್ ಹೇಳಿದರು.
ನಗರ ಹೊರವಲಯದ ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್.ಎಂ ಸೆಹಗಲ್ ೌಂಡೇಷನ್ ವತಿಯಿಂದ ರೈತರಿಗಾಗಿ ಆಯೋಜಿಸಿದ್ದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿಯ ಜತೆಗೆ ಜೇನು ಸಾಕಾಣಿಕೆಯನ್ನು ಉಪಕಸುಬಾಗಿ ಕೈಗೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಜೇನುತುಪ್ಪಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇದರಿಂದಾಗಿ ಆದಾಯ ದ್ವಿಗುಣವಾಗುತ್ತದೆ. ವೈಜ್ಞಾನಿಕ ಮಾಹಿತಿ ಪಡೆದುಕೊಂಡು ಜೇನುಸಾಕಾಣಿಕೆ ಮಾಡುವುದು ಸೂಕ್ತ ಎಂದರು.
ಜೇನು ಕೃಷಿ ವಿಜ್ಞಾನಿ ಡಾ.ಮಂಜುನಾಥ್ರೆಡ್ಡಿ ಮಾತನಾಡಿ, ಜೇನು ಸಾಕಾಣಿಕೆ ಬಗ್ಗೆ ವೈಜ್ಞಾನಿಕ ವಿಧಾನಗಳನ್ನು ಅರಿತು, ಪ್ರಾಯೋಗಿಕವಾಗಿ ಕಲಿತ ನಂತರವೇ ಜೇನು ಸಾಕಾಣಿಕೆ ಮಾಡುವುದು ಉತ್ತಮ ಎಂದು ಅಭಿಪಾಯಪಟ್ಟರು.
ಕೀಟಶಾಸ್ತ್ರಜ್ಞೆ ಡಾ.ಅಮಲಾ ಮಾತನಾಡಿ, ಜೇನು ಕೃಷಿಯ ವೈಜ್ಞಾನಿಕ ವಿಧಾನಗಳು, ಅದರ ಮೂಲ, ಜೀವನ ಚಕ್ರ ಮತ್ತು ಜೇನುನೊಣ ಕುಟುಂಬದಲ್ಲಿ ರಾಣಿ ಜೇನಿನ ಮಹತ್ವ, ಜೇನು ಕೊಯ್ಲಿನ ಸರಿಯಾದ ಹಂತ, ಜೇನು ಸಾಕಣೆಯಲ್ಲಿ ವಸಾಹತುಗಳನ್ನು ನಿರ್ವಹಿಸುವುದು, ರಾಣಿ ಕೋಶವನ್ನು ಗುರುತಿಸುವುದರ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಜ್ಞಾನಿ ಡಾ.ಆಶಾ, ವೇಣು, ಎಸ್.ಎಂ ಸೆಹಗಲ್ ಫೌಂಡೇಷನ್ ಕಾರ್ಯಕ್ರಮ ಸಹಾಯಕ ಅಧಿಕಾರಿ ವಿಜಯ್ ಪುಲಿ, ನವ್ಯಾ ಇದ್ದರು.