

ಬೆಂಗಳೂರು: ಕೋವಿಡ್ ಹಗರಣ ಸಂಸತ್ತಿನಲ್ಲಿ ಪ್ರಸ್ತಾಪ (covid scam is discussed in parliament) ಮಾಡಿದರೆ ಸಮರ್ಪಕ ಉತ್ತರ ಸಿಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameswar) ಹೇಳಿದರು.
ಹಗರಣದಲ್ಲಿ ಭಾಗಿಯಾದವರು ಸಂಸದರಾಗಿದ್ದಾರೆ. ಹಾಗಾಗಿ ಸಂಸತ್ತಿನಲ್ಲಿ ಚರ್ಚೆ ಮಾಡಿದರೆ ಒಳ್ಳೆಯದು. ಅಲ್ಲೇ ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಕೂಡ ಕೋವಿಡ್ ಸಂದರ್ಭದಲ್ಲಿ ಹಣ ಕೊಟ್ಟಿತ್ತು. ಕಾರಣ ಸಂಸತ್ತಿನಲ್ಲಿ ಚರ್ಚೆಯಾದರೆ ರಾಷ್ಟ್ರದ ಗಮನ ಸೆಳೆಯುತ್ತದೆ ಎಂದು ಹೇಳಿದರು.
ವಕ್ಫ್‌ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಅವರು ಅಂದುಕೊಂಡಿರಬಹುದು. ಹೆಚ್ಚು ಡ್ಯಾಮೇಜ್ ಮಾಡಿ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರು ಸ್ಥಳೀಯವಾಗಿ ಮನಸ್ಥಾಪಗಳು ಬರಲು ನಾವು ಕಾರಣೀಭೂತರಾಗಬಾರದು. ಡಿವೈಡ್ ಅಂಡ್ ರೂಲ್ ಮಾಡಲು ಹೋದರೆ ಅದು ಸಮಂಜಸವಾಗಿ ಕಾಣಿಸುವುದಿಲ್ಲ. ಪ್ರತಿಭಟನೆ ಒಕೆ ಆದರೆ,ಸಮಾಜದ ಸ್ವಾಸ್ಥ್ಯ ಹದಗೆಡಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬೆಳಗಾವಿ ಅಧಿವೇಶನದಲ್ಲಿ ನಾವು ಸಮಂಜಸ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಮೊದಲು ತಮ್ಮ ಪಕ್ಷದ ಸಮಸ್ಯೆ ಸರಿಪಡಿಸಿಕೊಳ್ಳಲಿ. ನಮಗೆ ಬುದ್ದಿ ಹೇಳುವ ಬದಲು ಅವರು ಸರಿಯಾರೆ ಅವರ ಪಕ್ಷಕ್ಕೂ ಒಳ್ಳೆಯದು, ನಮಗೂ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಕರಿಯ ಎಂದು ಲೇವಡಿ ಮಾಡಿರುವ ಕುರಿತ ಪ್ರಶ್ನೆಗೆ, ಜಮೀರ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರು ಯಾವ ದೃಷ್ಟಿಕೋನದಿಂದ ನೋಡಿದ್ದಾರೋ ಗೊತ್ತಿಲ್ಲ. ಇದು ಅವರಿಗೆ ಸಂಬಂಪಟ್ಟದ್ದು ಎಂದರು.
ನಮ್ಮದು 40 ಪರ್ಸೆಂಟ್ ಸರ್ಕಾರ ಅಲ್ಲ ಎಂದು ನಾವು ಮೊದಲಿಂದ ಹೇಳಿಕೊಂಡು ಬಂದಿದ್ದೇವೆ. ಬಿಜೆಪಿ ವಿರುದ್ಧ ನಾವು ಭ್ರಷ್ಟಾಚಾರ ಆರೋಪ ಮಾಡುವಾಗ ಕೆಲವು ಆಧಾರ ಇಟ್ಟುಕೊಂಡು ಹೇಳಿದ್ದೆವು. ಆದರೆ ಬಿಜೆಪಿಯವರು ಹೇಳಿದ್ದು ಸತ್ಯಕ್ಕೆ ದೂರವಾದುದು ಎಂದು ನಾವು ಪದೇ ಪದೆ ಹೇಳುತ್ತ ಬಂದಿದ್ದೇವೆ. ಈಗ ನಾವು ಹೇಳಿದ್ದು ನಿಜವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಡಾ. ಪರಮೇಶ್ವರ್ ಉತ್ತರಿಸಿದರು.