ಶಿಸ್ತುಬದ್ಧ ಜೀವನದಿಂದ ಮಾತ್ರ ಉತ್ತಮ ಆರೋಗ್ಯ

24SPT3
ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವಾಮೀಜಿಗಳು ರಕ್ತದಾನ ಮಾಡಿದರು.
Published on

ಸೋಮವಾರಪೇಟೆ : ಶಿಸ್ತುಬದ್ಧ ಜೀವನದಿಂದ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಕೊಡ್ಲಿಪೇಟೆ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಶ್ರೀ ಶಿವಕುಮಾರ ಶ್ರೀಗಳ 118ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದ ಪ್ರಯುಕ್ತ ಶ್ರೀ ಶಿವಕುಮಾರ ಸ್ವಾಮಿ ಜಯಂತ್ಯುತ್ಸವ ಆಚರಣಾ ಸಮಿತಿ, ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ ಹಾಗೂ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ವರ್ಷಕ್ಕೆ ಕನಿಷ್ಠ ಮೂರು ಭಾರಿ ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಯುವಕರು ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದರು.

ಸಿದ್ಧಗಂಗಾ ಶ್ರೀಗಳು ತಮ್ಮ ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡಿದ್ದರಿಂದಲೇ 111 ವರ್ಷಗಳ ಕಾಲ ಬದುಕಿದ್ದರು. ತಮ್ಮ ಬದುಕಿನಲ್ಲಿ 88 ವರ್ಷಗಳನ್ನು ಸಮಾಜ ಸೇವೆಯಲ್ಲೇ ಕಳೆದಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿದಲ್ಲಿ ಸಮಾಜ ಸುಧಾರಣೆ ಸಾಧ್ಯ ಎಂದು ತಿಳಿದಿದ್ದ ಅವರು, 1917ರಲ್ಲಿಯೇ ಸಂಸ್ಕೃತ ಕಾಲೇಜನ್ನು ಮಠದ ಅಧೀನದಲ್ಲಿ ಪ್ರಾರಂಭಿಸಿದ್ದರು ಎಂದು ಹೇಳಿದರು.

ತಮ್ಮ ಮಠದಲ್ಲಿ ಜಾತಿ, ಧರ್ಮದ ಕಟ್ಟುಪಾಡುಗಳನ್ನು ವಿಧಿಸದೆ, ಎಲ್ಲರಿಗೂ ಏಕ ರೂಪದ ಶಿಕ್ಷಣ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಇಂದಿಗೂ ಮಠದಲ್ಲಿ ವಿವಿಧ ಜಾತಿ ಧರ್ಮಕ್ಕೆ ಸೇರಿದ 10 ಸಾವಿರ ವಿದ್ಯಾರ್ಥಿಗಳು ಒಂದೇ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ನಾವು ಮಾಡುವ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಜೀವ ಮತ್ತು ಅದರ ಚಲನೆ ರಕ್ತದ ಮೇಲೆ ಅವಲಂಬಿತವಾಗಿದೆ. ಹಿಂದೆ ಜನರಲ್ಲಿ ರಕ್ತದಾನದ ಮಹತ್ವ ಮತ್ತು ಅರಿವಿನ ಕೊರತೆಯಿಂದ ರಕ್ತದ ಕೊರತೆ ಹೆಚ್ಚಾಗಿ ಕಾಡುತ್ತಿತ್ತು. ಆದರೆ, ಇಂದು ಅದರ ಮಹತ್ವವನ್ನು ತಿಳಿದಿರುವ ಸಮಾಜದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಸಂಘ ಸಂಸ್ಥೆಗಳು ಮಹನೀಯರ ಹೆಸರಿನಲ್ಲಿ ರಕ್ತದಾನ ಶಿಬಿರಗಳನ್ನು ಮಾಡುವುದರಿಂದ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಪ್ರಯೋಜನವಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಂತ ಸ್ವಾಮೀಜಿ, ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ ಮಾಳವ, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಅಬಕಾರಿ ಇಲಾಖೆ ನಿರೀಕ್ಷಕ ಲೋಕೇಶ್, ಬಿಟಿಸಿಜಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಇದ್ದರು.

----------

24ಎಸ್‌ಪಿಟಿ3

ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವಾಮೀಜಿಗಳು ರಕ್ತದಾನ ಮಾಡಿದರು.

-------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net