ಮೇಕ್ ಇನ್ ಇಂಡಿಯಾ ಯೋಜನೆ: ಉತ್ತಮ ನಿರ್ಧಾರ

editooo
Published on

ಕರೊನಾ ಸೋಂಕಿನ ತೀವ್ರತೆ, ಅದನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾದ ಲಾಕ್​ಡೌನ್, ಆ ಬಳಿಕವೂ ಮುಂದುವರಿದ ಕೆಲ ನಿರ್ಬಂಧಗಳ ಪರಿಣಾಮ ಉದ್ಯಮವಲಯ ನೆಲಕಚ್ಚಿದ್ದು ಗೊತ್ತಿರುವ ಸಂಗತಿ. ಇದು ಆರ್ಥಿಕ ನಷ್ಟವನ್ನಷ್ಟೇ ಉಂಟು ಮಾಡಲಿಲ್ಲ. ನವೋದ್ಯಮಿಗಳಾಗಲು ಹೊರಟವರ, ಹೊಸ ಉದ್ಯಮಗಳ ಸ್ಥಾಪನೆಗೆ ಮುಂದಡಿ ಇಡುತ್ತಿದ್ದ ಅದೆಷ್ಟೋ ಯುವಕರ ಕನಸುಗಳನ್ನೇ ಕಿತ್ತುಕೊಂಡಿತು. ಹಲವು ಕಂಪನಿ, ಕೈಗಾರಿಕೆಗಳು ಮುಚ್ಚಿದ ಫಲವಾಗಿ, ಕೆಲಸ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಿತು. ಹಾಗಾಗಿ, ಹೊಸ ಉದ್ಯಮಗಳ ಸ್ಥಾಪನೆಗೆ ಹಿನ್ನಡೆಯಾದರೆ, ಬಂಡವಾಳ ಹೂಡಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ. ಸರ್ಕಾರದ ಯೋಜನೆಗಳು, ಹಲವು ಕಾರ್ಯಕ್ರಮಗಳು ಏರುಪೇರಾದವು. ಆರ್ಥಿಕ ಚಟುವಟಿಕೆಗಳು ಕ್ರಮೇಣ ಚೇತರಿಕೆ ಕಾಣುತ್ತಿರುವುದು ಸಮಾಧಾನಕರ ಅಂಶವಾದರೂ, ಔದ್ಯೋಗಿಕ ರಂಗ ಹಳಿಗೆ ಬರಲು ಇನ್ನಷ್ಟು ಕಾಲಾವಕಾಶದ ಜತೆಗೆ ವಿಶೇಷ ಪ್ರಯತ್ನಗಳೂ ಬೇಕು.

ಉತ್ಪಾದನಾ ರಂಗದಲ್ಲಿ ಸ್ವಾವಲಂಬನೆ ಸಾಧಿಸುವ, ಯುವಕರಲ್ಲಿ ಉದ್ಯಮಶೀಲತೆ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆ ಘೋಷಿಸಿ, ಅನುಷ್ಠಾನಕ್ಕೆ ತಂದಿದೆ. ಆದರೂ, ಗುರಿಸಾಧನೆ ನಿಟ್ಟಿನಲ್ಲಿ ಸಾಗಬೇಕಿರುವ ಹಾದಿ ದೀರ್ಘವಿದೆ. ಈ ವಾಸ್ತವವನ್ನು ಮನಗಂಡು ಕೆಲ ಪ್ರಮುಖ ಕೊರತೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆತ್ಮನಿರ್ಭರ ಯೋಜನೆಗೆ ಪೂರಕವಾದ ಎರಡು ಪ್ರಸ್ತಾವನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿರುವುದು ಗಮನಾರ್ಹ. ವೈಟ್ ಗೂಡ್ಸ್ (ಏರ್ ಕಂಡಿಷನರ್ಸ್ ಮತ್ತು ಎಲ್​ಇಡಿ ಲೈಟ್ಸ್)ಗಾಗಿ ಇರುವ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆ ಬಜೆಟ್ ವಿನಿಯೋಗವಾಗಿ -ರೂ;6,238 ಕೋಟಿಯ ಪ್ರಸ್ತಾವನೆ ಮತ್ತು ನವೀಕರಿಸಬಹುದಾದ ಇಂಧನ ಪ್ರಸ್ತಾವನೆಗೆ ಸಂಬಂಧಿಸಿದ ಬಜೆಟ್ ವಿನಿಯೋಗ -ರೂ;4,500 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಇವು ಒಳಗೊಂಡಿವೆ.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಇರುವ ತೊಡಕುಗಳನ್ನು ನಿವಾರಿಸುವುದು, ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ದೊಡ್ಡ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸುವುದು ಪಿಎಲ್​ಐ ಯೋಜನೆಯ ಉದ್ದೇಶವಾಗಿದೆ. ಇದರಿಂದ ಜಾಗತಿಕ ಬಂಡವಾಳ ಆಕರ್ಷಿಸಲು, ರಫ್ತು ಸಾಮರ್ಥ್ಯ ಉತ್ತೇಜಿಸಲು, ಉದ್ಯೋಗಾವಕಾಶ ಸೃಷ್ಟಿಸಲು ನೆರವಾಗಲಿದೆ. ಇಂಥ ಪ್ರೋತ್ಸಾಹದಾಯಕ ಯೋಜನೆಗಳನ್ನು ಉದ್ಯಮದಲ್ಲಿನ ಹಲವು ಕ್ಷೇತ್ರಗಳು ನಿರೀಕ್ಷಿಸುತ್ತಿವೆ. ಭಾರತದಲ್ಲಿ ಉತ್ಪಾದನೆ ಹೆಚ್ಚಿಸುವಂತೆ ಮಾಡಲು ಇಂಥ ಇನ್ನಷ್ಟು ಕ್ರಮಗಳ ಅಗತ್ಯವಿದೆ. ಕೋವಿಡ್​ನ ಎರಡನೇ ಅಲೆ ವ್ಯಾಪಕವಾಗಿರುವುದರಿಂದ ಔದ್ಯೋಗಿಕ ರಂಗ ಮತ್ತೆ ಆತಂಕಕ್ಕೆ ಒಳಗಾಗಿದೆ. ಲಾಕ್​ಡೌನ್​ನಂಥ ಸನ್ನಿವೇಶ ಸೃಷ್ಟಿಯಾದರೆ ಹೇಗೆ ಎಂಬ ಭಯವೂ ಕಾಡುತ್ತಿದೆ. ಹೀಗಿರುವಾಗ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಮೂಲಕ ಆತ್ಮನಿರ್ಭರ ಯೋಜನೆಗೆ ಬಲ ತುಂಬಲು ಮುಂದಾಗಿರುವುದು ಸಮಾಧಾನಕರ ಸಂಗತಿ. ಈ ಪ್ರಯೋಜನಗಳನ್ನು ಸದುಪಯೋಗ ಪಡಿಸಿಕೊಂಡು ಉತ್ಪಾದನಾ ವಲಯ ಬಲಗೊಂಡರೆ, ಉದ್ಯೋಗಾವಕಾಶಗಳು ಹೆಚ್ಚುವ ಜತೆಗೆ, ನವೋದ್ಯಮಿಗಳಲ್ಲೂ ಉತ್ಸಾಹ ಮರಳುತ್ತದೆ. ಅಂಥ ಪೂರಕ ವಾತಾವರಣ ನಿರ್ವಣಗೊಳ್ಳುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net