

ಕೋಲ್ಕತ: ಪಶ್ಚಿಮಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಆರು ಸಂಶೋಧಕರು ಸಸ್ಯಗಳ ಬೆಳವಣಿಗೆ ಉತ್ತೇಜಿಸುವ ಹೊಸ ತಳಿಯ ಬ್ಯಾಕ್ಟೀರಿಯಾವನ್ನು ಕಂಡುಹಿಡಿದಿದ್ದು, ಅದಕ್ಕೆ ‘ಪ್ಯಾಂಟೊವಾ ಟ್ಯಾಗೋರೆ’ (Pantoea Tagorei) ಎಂಬ ಹೆಸರನ್ನು ಇಟ್ಟಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಗೌರವಾರ್ಥ ಈ ಹೆಸರನ್ನು ಇರಿಸಿದ್ದಾರೆ. ಕೃಷಿಯನ್ನು ಉತ್ತಮ ರೀತಿಯಲ್ಲಿ ಉತ್ತೇಜಿಸುವಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ಕೊಡುಗೆ ಗುರುತಿಸಿ ಈ ಹೆಸರು ಇಡಲಾಗಿದೆ. ಈ ಮೂಲಕ ಇದೇ ಮೊದಲ ಸಲ ಅವರ ಹೆಸರನ್ನು ಜೀವಿಯೊಂದಕ್ಕೆ ಇಟ್ಟಂತಾಗಿದೆ ಎಂದು ವಿಶ್ವಭಾರತಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮೈಕ್ರೋಬಯಾಲಜಿ ಲ್ಯಾಬೋರೇಟರಿಯ ಸಹಾಯಕ ಪ್ರಾಧ್ಯಾಪಕ ಬೊಂಬಾ ಡಾಮ್ ತಿಳಿಸಿದ್ದಾರೆ. ಈ ಸಂಶೋಧನೆಯಲ್ಲಿ ಇವರೊಂದಿಗೆ ರಾಜು ವಿಶ್ವಾಸ್, ಅರ್ಜಿತ್ ಮಿಶ್ರಾ, ಸಂದೀಪ್ ಘೋಷ್, ಅಭಿನವ ಚಕ್ರವರ್ತಿ, ಪೂಜಾ ಮುಖರ್ಜಿ ಜೊತೆಯಾಗಿದ್ದು, ಸಂಶೋಧನೆಯ ವಿವರಗಳು ಇಂಡಿಯನ್ ಜರ್ನಲ್ ಆಫ್ ಮೈಕ್ರೋಬಯಾಲಜಿಯಲ್ಲಿ ಪ್ರಕಟಗೊಂಡಿವೆ.
ಏನಿದರ ವಿಶೇಷ?: ಝಾರಿಯಾ ಕಲ್ಲಿದ್ದಲು ಗಣಿಯಲ್ಲಿ ಕಂಡುಬಂದಿರುವ ಈ ಬ್ಯಾಕ್ಟೀರಿಯಾ ಪೊಟ್ಯಾಷಿಯಮ್ ಹಾಗೂ ಫಾಸ್ಪರಸ್ ಕರಗಿಸುವ ಜತೆಗೆ ನೈಟ್ರೋಜನ್ ಮರುಪೂರಣಕ್ಕೂ ಕಾರಣವಾಗುತ್ತದೆ. ಅಲ್ಲದೆ ಸಸ್ಯದ ಬೆಳವಣಿಗೆ ಉತ್ತೇಜಿಸುವ ಗುಣಲಕ್ಷಣವನ್ನೂ ಇದು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.