

ಗೋಣಿಕೊಪ್ಪಲು: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಿದ್ದು, ಹಳೆಯ ವಿದ್ಯಾರ್ಥಿಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.
ಶಾಲೆಯ ಆವರಣದಲ್ಲಿ ಶತಮಾನೋತ್ಸವ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಚಿಕೆ ಕುರಿತು ಚರ್ಚಿಸಲಾಯಿತು. ಸ್ಮರಣ ಸಂಚಿಕೆ ಸುಮಾರು ಮುನ್ನೂರು ಪುಟಗಳನ್ನು ಹೊಂದಿರುತ್ತದೆ. ಶಾಲೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಶತಮಾನೋತ್ಸವ ಆಚರಣೆಯ ಚಿತ್ರಗಳು ಸೇರಿದಂತೆ ಶಾಲೆ ನಡೆದು ಬಂದ ಐತಿಹಾಸಿಕ ಲೇಖನಗಳು, ರಾಜ್ಯಪಾಲರು, ಮುಖ್ಯಮಂತ್ರಿ, ಶಾಸಕರು, ಸಚಿವರು, ಉಸ್ತುವಾರಿ ಸಚಿವರ ಶುಭ ಸಂದೇಶಗಳು, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬರಹಗಳು ದಾಖಲಾಗುತ್ತವೆ.
ಜತೆಗೆ ಹಳೇ, ಹಿರಿಯ ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಹ ಪುಸ್ತಕದಲ್ಲಿ ಅಳವಡಿಸಲಾಗುವುದು. ಹಳೆಯ ವಿದ್ಯಾರ್ಥಿಗಳು ವೈಚಾರಿಕ, ಸಾಮಾಜಿಕ, ಶೈಕ್ಷಣಿಕ ಲೇಖನಗಳನ್ನು, ಕಥೆ, ಕವನಗಳನ್ನು ಕಳುಹಿಸಬಹುದಾಗಿದೆ. ಲೇಖನಗಳನ್ನು ಡಿ.31ರ ಒಳಗೆ ಕಳುಹಿಸಿಕೊಡಲು ಸಮಿತಿ ಮನವಿ ಮಾಡಿದೆ. ಲೇಖನಗಳನ್ನು ಮುಖ್ಯಶಿಕ್ಷಕರು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಅಥವಾ 9259950459 ವಾಟ್ಸ್‌ಆ್ಯಪ್ ಸಂಖ್ಯೆಗೆ ಲೇಖನಗಳನ್ನು ಕಳುಹಿಸಬಹುದು ಎಂದು ತಿಳಿಸಿದ್ದಾರೆ.
ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಸದಸ್ಯರಾದ ಬಿ.ಎನ್.ಪ್ರಕಾಶ್, ಮನೆಯಪಂಡ ಗಣಪತಿ ಮೋತಿ, ಚಂದನ ಡಿ.ಮಂಜುನಾಥ್, ಎಂ. ಮಂಜುಳಾ, ದೇವರಾಜು ಬಿ.ಟಿ, ಎಗ್ನೆಸ್, ಬಿ.ಆರ್. ಸತೀಶ್, ದಮಯಂತಿ, ಜಯಶ್ರೀ, ಜಗದೀಶ್ ಜೋಡುಬೀಟಿ ಇದ್ದರು.