ಗೋಮಾಳ ಜಮೀನು ಉಳಿಸಲು ರೈತರ ಆಗ್ರಹ

27-RNR-04
Published on

ರಾಣೆಬೆನ್ನೂರ: ತಾಲೂಕಿನ ಮಾಗೋಡ ಗ್ರಾಮದ 163 ಎಕರೆ ಗೋಮಾಳ ಜಮೀನನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಜಮೀನು ಉಳಿಸಿ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಮಾಗೋಡ ಗ್ರಾಮದ ಗೋಮಾಳ ಜಮೀನನ್ನು ತಾಲೂಕು ಆಡಳಿತ ಕೈಗಾರಿಕೆ ಪ್ರದೇಶ ಎಂದು ಉತಾರದಲ್ಲಿ ತಿದ್ದುಪಡಿ ಮಾಡಿತ್ತು. ಈ ಕುರಿತು ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರಿಂದ ನ್ಯಾಯಾಲಯ ಗೋಮಾಳ ಜಮೀನನ್ನು ಜಾನುವಾರುಗಳಿಗೆ ಮೀಸಲಿಡಬೇಕು ಎಂದು ಆದೇಶಿಸಿದೆ. ಅಲ್ಲದೆ ಉತಾರ ತಿದ್ದುಪಡಿಗೆ ಸೂಚಿಸಿದೆ. ಆದರೆ, ತಾಲೂಕು ಆಡಳಿತ ಮಾತ್ರ ಈವರೆಗೂ ಉತಾರದಲ್ಲಿ ಕೈಗಾರಿಕೆ ಪ್ರದೇಶ ಎಂದು ನಮೂದು ಮಾಡಿಟ್ಟಿದೆ.
ಇದರಿಂದ ರೈತರಿಗೆ ಹಾಗೂ ಉತಾರ ನೋಡಿದವರಿಗೆ ಇನ್ನೂ ಗೊಂದಲ ಉಂಟಾಗುತ್ತಿದೆ. ಆದ್ದರಿಂದ ಮುಂದಿನ ಎರಡು ವಾರದೊಳಗೆ ತಾಲೂಕು ಆಡಳಿತ ಉತಾರ ತಿದ್ದುಪಡಿ ಮಾಡಿ ಗೋಮಾಳ ಜಮೀನನನ್ನು ಯಥಾವತ್ತಾಗಿ ಮುಂದುವರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಹೊರವಲಯದ ಓಂ ಪಬ್ಲಿಕ್ ಶಾಲೆ ಬಳಿಯಿರುವ ಕೈಗಾರಿಕೆ ಪ್ರದೇಶದಲ್ಲಿ ಬಹಳಷ್ಟು ನಿವೇಶನಗಳು ಇನ್ನೂ ಖಾಲಿಯಿವೆ. ಅವುಗಳನ್ನು ಮೊದಲು ಬಳಕೆ ಮಾಡಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಚನ್ನಬಸಪ್ಪ ಮೂದಿಗೌಡ್ರ, ಉಜ್ಜಪ್ಪ ಕಮದೋಡ, ರಮೇಶ ಮುದುಕಣ್ಣಗೌಡ್ರ, ಬಸಪ್ಪ ಹೊಸಗೌಡ್ರ, ನಾಗಪ್ಪ ಬಸನಗೌಡ್ರ, ರಮೇಶ ಮಾಕನೂರ, ಉಮೇಶ ಹಾದಿಮನಿ, ರಮೇಶ ಮಳಲೇರ, ಮಹೇಶ ಮಲ್ಲಾಪುರ, ಹನುಮಂತಪ್ಪ ಮಜ್ಜಗಿ, ರಾಮಪ್ಪ ಕೆಂಚರೆಡ್ಡಿ, ಮಲ್ಲಿಕಾರ್ಜುನ ಕೊಪ್ಪದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net