ಸಂಕಷ್ಟದಲ್ಲೂ ಗೋಲ್ಮಾಲ್: ಕಳಪೆ ಪಿಪಿಇ ಕಿಟ್ ಖರೀದಿಸಿದ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಸಂಸ್ಥೆ

kit april
Published on

ಬೇಲೂರು ಹರೀಶ ಬೆಂಗಳೂರು

ಇಡೀ ದೇಶ ಕರೊನಾ ವಿರುದ್ಧದ ಹೋರಾಟದತ್ತ ಚಿತ್ತ ನೆಟ್ಟಿದ್ದರೆ, ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್ ಹೌಸಿಂಗ್ ಸೊಸೈಟಿ (ಕೆಡಿಎಲ್​ಡಬ್ಲ್ಯುಎಸ್)ಎಂಬ ಸರ್ಕಾರಿ ಸಂಸ್ಥೆ ದೋಷಪೂರಿತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಕಿಟ್) ಸರಬರಾಜು ಮಾಡಿ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಆರೋಪ ಕೇಳಿಬಂದಿದೆ. ಕರೊನಾ ಸೋಂಕಿತರ ತಪಾಸಣೆಗೆ ನೀಡಿದ್ದ ಚೀನಿ ನಿರ್ವಿುತ ಕ್ಷಿಪ್ರ ಪರೀಕ್ಷಾ ಕಿಟ್​ಗಳು (ರ್ಯಾಪಿಡ್ ಟೆಸ್ಟ್ ಕಿಟ್) ದೋಷಪೂರಿತ ಎಂಬ ವಿಚಾರ ಬಹಿರಂಗವಾದ ಬೆನ್ನಲ್ಲೇ ರಾಜ್ಯದಲ್ಲೂ ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮದ ಘಾಟು ಬಡಿದಿದೆ.

ಮಹಾರಾಷ್ಟ್ರ ಮೂಲದ ಕಂಪನಿ ಮುಖಾಂತರ 22 ಕೋಟಿ ರೂ. ಮೌಲ್ಯದ 3 ಲಕ್ಷ ಪಿಪಿಇ ಕಿಟ್ ಖರೀದಿಗೆ ಆದೇಶಿಸಲಾಗಿದೆ. ಈಗಾಗಲೇ 1.5 ಲಕ್ಷ ಕಿಟ್​ಗಳನ್ನು ಕಂಪನಿ ಪೂರೈಕೆ ಮಾಡಿದ್ದು, ಅವುಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್​ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧರಿಸಲು ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಆದರೆ, ಈ ಕಿಟ್​ಗಳು ಅತ್ಯಂತ ಕಳಪೆಯಾಗಿವೆ ಎಂದು ಖುದ್ದು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ದೂರು ಕೊಟ್ಟಿದ್ದಾರೆ. ಹೀಗಾಗಿ ಪೂರೈಕೆಯಾಗಿರುವ ಎಲ್ಲ ಕಿಟ್​ಗಳನ್ನು ವಾಪಸ್ ತರಿಸಿಕೊಂಡು ಗೋದಾಮಿನಲ್ಲಿ ಸಂಗ್ರಹ ಮಾಡುವಂತೆ ಆದೇಶಿಸಲಾಗಿದೆ. ಇದರಿಂದ 22 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಕಿಟ್​ನಲ್ಲಿ ಏನೇನಿರುತ್ತೆ?: ಕರೊನಾ ಸೋಂಕಿತರ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಹಾಗೂ ನರ್ಸ್​ಗಳ ಸುರಕ್ಷತೆಗಾಗಿ ಪಿಪಿಇ ಕಿಟ್​ಗಳನ್ನು ನೀಡಲಾಗುತ್ತದೆ. ಈ ಕಿಟ್​ನಲ್ಲಿ ಫೇಸ್ ಮಾಸ್ಕ್, ಕನ್ನಡಕ, ಎನ್95 ಮುಖಗವಸು, ಶಸ್ತ್ರಚಿಕಿತ್ಸೆ ಮುಖಗವುಸು, ಕೈಗವಸು, ಎರಡು ಪದರದ ನಿಲುವಂಗಿ, ಪಾದರಕ್ಷೆಗಳ ಕವರ್, ತ್ಯಾಜ್ಯ ಬಿಸಾಡುವ ಚೀಲ, ಪ್ಲಾಸ್ಟಿಕ್ ಏಪ್ರಾನ್ ಸೇರಿ ಒಟ್ಟು 10 ಬಿಡಿ ವಸ್ತುಗಳು ಇರುತ್ತವೆ.

ಕಿಟ್​ಗಾಗಿ ಪ್ರತಿಭಟನೆ

ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಈಗಾಗಲೇ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರೋಗಿಗಳ ತಪಾಸಣೆ ಸಂದರ್ಭದಲ್ಲಿ ವೈರಸ್ ಹರಡದಂತೆ ಧರಿಸಲು ಗುಣಮಟ್ಟದ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡುವಂತೆ ರಾಜ್ಯದ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಸುಸಜ್ಜಿತ ಗುಣಮಟ್ಟದ ಕಿಟ್ ಒದಗಿಸುವುದು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜವಾಬ್ದಾರಿ. ಈ ಬಗ್ಗೆ ಗಮನ ಹರಿಸಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.

22 ಕೋಟಿ ರೂ.ಕಥೆಯೇನು?

22 ಕೋಟಿ ರೂ.ಮೌಲ್ಯದ ಕಿಟ್​ಗಳಿಗೆ ಆದೇಶ ಕೊಟ್ಟಿರುವ ಕೆಡಿಎಲ್​ಡಬ್ಲ್ಯುಎಸ್ ಈಗಾಗಲೇ ಅರ್ಧದಷ್ಟು ಹಣವನ್ನು ಬಿಡುಗಡೆ ಮಾಡಿದೆ. ಇದೀಗ ಕಳಪೆ ಕಿಟ್ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಂದ ವಾಪಸ್ ತರಿಸಿಕೊಂಡು ಬೆಂಗಳೂರು ಗ್ರಾಮಾಂತರ ಪ್ರದೇಶವೊಂದರ ಉಗ್ರಾಣದಲ್ಲಿ ದಾಸ್ತಾನು ಮಾಡಲು ಆದೇಶಿಸಲಾಗಿದೆ. ವೈದ್ಯರ ಸುರಕ್ಷತೆ ದೃಷ್ಟಿಯಿಂದ ಕಳಪೆ ಕಿಟ್​ಗಳನ್ನು ವಾಪಸ್ ತರಿಸಿಕೊಂಡಿರುವುದು ಸರಿ. ಕಿಟ್​ಗಳನ್ನು ಮತ್ತೆ ಆ ಕಂಪನಿಗೇ ಕಳುಹಿಸಿ ಹಣ ಹಿಂಪಡೆಯಬೇಕು. ಜತೆಗೆ ದಂಡವನ್ನೂ ವಿಧಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಕೆಡಿಎಲ್​ಡಬ್ಲ್ಯುಎಸ್ ಕರ್ತವ್ಯವೇನು?

ಆರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಡಿಎಲ್​ಡಬ್ಲ್ಯುಎಸ್, ಪ್ರತಿ ವರ್ಷ ಟೆಂಡರ್ ಮುಖಾಂತರ ಬ್ಯಾಂಡೇಜ್ ಕ್ಲಾತ್, ಕಾಟನ್, ಗ್ಲೂಕೋಸ್ ಬಾಟಲ್, ಚುಚ್ಚುಮದ್ದು ಸೇರಿ ವಿವಿಧ ಔಷಧಿಗಳನ್ನು ಖರೀದಿಸಿ ಉಚಿತವಾಗಿ ರಾಜ್ಯದ ಎಲ್ಲ ಸರ್ಕಾರಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಪೂರೈಸುವ ಜವಾಬ್ದಾರಿಯನ್ನು ಹೊಂದಿದೆ. ಈ ಹಿಂದೆಯೂ ಸಂಸ್ಥೆಯ ವಿರುದ್ಧ ಅವ್ಯವಹಾರ ಆರೋಪಗಳು ಕೇಳಿಬಂದಿವೆ.

ಸರ್ಕಾರವೇ ವಸೂಲಿ ಮಾಡಲಿ

ರಾಜ್ಯದಲ್ಲಿ ಕರೊನಾ ಮಹಾಮಾರಿ ಆರ್ಭಟ ತಾರಕಕ್ಕೇರಿರುವ ಸಂದರ್ಭದಲ್ಲಿ ನಾಗರಿಕರ ಜತೆಗೆ ಉದ್ಯಮಿಗಳು, ಕೂಲಿಕಾರರು, ವ್ಯಾಪಾರಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದೆ ಬದುಕು ಮುನ್ನಡೆಸಲು ಕಷ್ಟ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸ್ಮಶಾನ ನೌಕರರಿಂದ ಕಡುಬಡವರವರೆಗೂ ಕರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದಾರೆ. ಇಂತಹ ಹಣವನ್ನು ಸರ್ಕಾರಕ್ಕೆ ಯಾಮಾರಿಸಿರುವವರ ವಿರುದ್ಧ ಕ್ರಮಕೈಗೊಂಡು ಹಣವನ್ನು ವಸೂಲಿ ಮಾಡಬೇಕೆಂಬ ಕೂಗು ಪ್ರತಿಧ್ವನಿಸಿದೆ.

ವಿಜಯವಾಣಿಗೆ ದಾಖಲೆಗಳು ಲಭ್ಯ

ಕಳಪೆ ಎಂಬ ಕಾರಣಕ್ಕೆ ಪಿಪಿಇ ಕಿಟ್​ಗಳನ್ನು ವಾಪಸ್ ತರಿಸಿಕೊಂಡು ಉಗ್ರಾಣದಲ್ಲಿಡುವಂತೆ ಕೆಡಿಎಲ್​ಡಬ್ಲ್ಯುಎಸ್ ಅಪರ ನಿರ್ದೇಶಕಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರೂ ಆಗಿರುವ ಎನ್. ಮಂಜುಶ್ರೀ ಹೊರಡಿಸಿರುವ ಆದೇಶ ಪ್ರತಿ ವಿಜಯವಾಣಿಗೆ ಸಿಕ್ಕಿದೆ. ಪಿಪಿಇ ಕಿಟ್​ಗಳನ್ನು ಹಿಂಪಡೆಯುವಂತೆ ಪ್ಲಾಸ್ಟಿಸರ್ಜ್ ಕಂಪನಿಗೆ ಏ.7ರಂದೇ ಆದೇಶಿಸಲಾಗಿದೆ. ಈಗಾಗಲೇ ಪೂರೈಕೆಯಾಗಿರುವ ಕಿಟ್​ಗಳನ್ನು ಬೆಂಗಳೂರು ಗ್ರಾಮಾಂತರ ಉಗ್ರಾಣಕ್ಕೆ ಹಿಂದಿರುಗಿಸಿ, ಮತ್ತೊಂದು ಸಂಸ್ಥೆಯಿಂದ ಖರೀದಿಸಿರುವ ಕಿಟ್​ಗಳನ್ನು ಸರಬರಾಜು ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಿಯಮ ಏನಿದೆ?

ಕರೊನಾ ನಿರ್ವಹಣೆ ಕಿಟ್ ಖರೀದಿಸುವುದಕ್ಕಾಗಿ ಕೆಡಿಎಲ್​ಡಬ್ಲ್ಯುಎಸ್​ಗೆ ನೂರಾರು ಕೋಟಿ ರೂ. ಅನುದಾನ ಸಿಕ್ಕಿದೆ. ಯಾವುದೇ ಉಪಕರಣ ಖರೀದಿಗೂ ಮುನ್ನ ಟೆಂಡರ್ ಆಹ್ವಾನಿಸಬೇಕು. ಈಗ ತುರ್ತು ಪರಿಸ್ಥಿತಿಯಾಗಿರುವ ಕಾರಣ ಟೆಂಡರ್ ಕರೆಯುವ ನಿಯಮದಿಂದ ವಿನಾಯಿತಿ ಸಿಕ್ಕರೂ ಕಂಪನಿ ಪೂರೈಸುವ ಕಿಟ್​ಗಳನ್ನು ಮೊದಲಿಗೆ ಲ್ಯಾಬ್​ನಲ್ಲಿ ಪರೀಕ್ಷಿಸಿ ಗುಣಮಟ್ಟದ ಖಚಿತತೆ ಕುರಿತು ವರದಿ ಬಂದ ನಂತರವೇ ಮುಂದಿನ ಖರೀದಿಗೆ ಆದೇಶ ಹೊರಡಿಸಬೇಕಿತ್ತು. ಆದರೆ, ಇದ್ಯಾವುದೇ ನಿಯಮ ಪಾಲಿಸದೆ ತರಾತುರಿಯಲ್ಲಿ ದರಪಟ್ಟಿ ಆಧಾರದ ಮೇಲೆ ಕಿಟ್​ಗಳನ್ನು ಖರೀದಿಸಿರುವ ಆರೋಪ ಕೇಳಿಬಂದಿದೆ.

ಅಕ್ರಮ ಹೇಗೆ?

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ-2000ರ (ಕೆಟಿಪಿಪಿ ಕಾಯ್ದೆ) ಟೆಂಡರ್ ನಡೆಸಿಲ್ಲ

ದರಪಟ್ಟಿ ಆಧಾರದ ಮೇಲೆ ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಗೆ 22 ಕೋಟಿ ರೂ. ಮೊತ್ತದ 3 ಲಕ್ಷ ಪಿಪಿಇ ಕಿಟ್ ಪೂರೈಸಲು ಮಾರ್ಚ್ ಕೊನೇ ವಾರದಲ್ಲಿ ಖರೀದಿ ಆದೇಶ ಹೊರಡಿಸಲಾಗಿತ್ತು

ಕೆಡಿಎಲ್​ಡಬ್ಲ್ಯುಎಸ್ ಅಧಿಕಾರಿಗಳು ಕಿಟ್​ಗಳ ಸಾಮರ್ಥ್ಯ ಪರೀಕ್ಷಿಸದೆಯೇ ಕಮೀಷನ್ ಆಸೆಗಾಗಿ ನಿಯಮಬಾಹಿರವಾಗಿ ತರಾತುರಿಯಲ್ಲಿ ಖರೀದಿ ಆದೇಶ ಕೊಟ್ಟಿದ್ದಾರೆ.

ಮೂರು ಲಕ್ಷ ಕಿಟ್​ಗಳ ಪೈಕಿ ಕಂಪನಿ ಪೂರೈಸಿರುವ 1.5 ಲಕ್ಷ ಕಿಟ್​ಗಳನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಈ ಕಿಟ್​ಗಳು ಅತ್ಯಂತ ಕಳಪೆಯಾಗಿದ್ದು, ಇವನ್ನು ಧರಿಸಿದರೂ ಸೋಂಕು ತಗುಲುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ಅಳಲು

ಆರಂಭದಲ್ಲಿ ಖರೀದಿಸಿರುವ ಪಿಪಿಇ ಕಿಟ್ ಕಳಪೆ ಎಂಬ ಮಾಹಿತಿ ಬಂದಿದೆ. ಖರೀದಿ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅವ್ಯವಹಾರ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

| ಡಾ.ಆರ್.ಪಾಟೀಲ್ ಓಂಪ್ರಕಾಶ್, ನಿರ್ದೇಶಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net