

ಬೆಂಗಳೂರು: ರಾಯಲ ಸ್ಟುಡಿಯೋಸ್ ಮೂಲಕ ವಿಖ್ಯಾತ್ .ಆರ್ ನಿರ್ದೇಶನದಲ್ಲಿ 'ಯುವರ್ ಸಿನ್ಸಿಯರ್ಲಿ ರಾಮ್' ಚಿತ್ರ ಸಿದ್ಧವಾಗುತ್ತಿರುವ ವಿಷಯ ಈಗಾಗಲೇ ಸಿನಿಪ್ರಿಯರಿಗೆ ಗೊತ್ತಾಗಿದೆ. ಈ ಕುರಿತಂತೆ ಚಿತ್ರತಂಡ ನಟ 'ಗೋಲ್ಡನ್ ಸ್ಟಾರ್ ಗಣೇಶ್' ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೋಸ್ಟ್ವೊಂದನ್ನು ಬಿಡುಗಡೆ ಮಾಡಿದೆ.
ಗಣೇಶ್ ಅವರು ಹನುಮಂತನ ವೇಷದಲ್ಲಿದ್ದು, ಕೈಯಲ್ಲಿ ಅಂಚೆಪತ್ರಗಳನ್ನು ಹಿಡಿದು ಸೈಕಲ್ಲಿನ ಮೇಲೆ ಕುಳಿತಿರುವ ವಿಶೇಷ ಪೋಸ್ಟರ್ ಅವರ ಅಭಿಮಾನಿಗಳನ್ನು ಸೆಳೆದಿದೆ. ಈ ಪೋಸ್ಟರ್ ಕಥೆಯ ಎಳೆ ಏನು? ಯಾವ ಜಾನರ್ ಮೇಲೆ ಮೂಡಿಬರಲಿದೆ ಎಂಬ ಕುತೂಹಲವನ್ನು ಕೆರಳಿಸಿದೆ. ಅಲ್ಲದೇ, ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೀತೆಗಾಗಿ ಸಂದೇಶ ತೆಗೆದುಕೊಂಡು ಹೋಗುತ್ತಿರುವ ಹನುಮಂತನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಸೈಕಲ್ ಚಲಾಯಿಸುತ್ತಿರುವ ರಾಮನ ಪಾತ್ರದಲ್ಲಿ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ ಎಂಬ ಅನುಮಾನ, ಕುತೂಹಲ ಮೂಡಿದೆ. ಒಟ್ಟಾರೆ ಸಿನಿಮಾ ತಂಡ ಬಿಡುಗಡೆಗೊಳಿಸಿರುವ ಈ ಪೋಸ್ಟರ್ನಲ್ಲಿ ಹಲವು ಕುತೂಹಲಕಾರಿ ಅಂಶಗಳಿದ್ದು, ಗಮನಿಸುತ್ತಾ ಹೋದಷ್ಟು ಹೆಚ್ಚೆಚ್ಚು ವಿಷಯಗಳು ಅಡಗಿವೆ ಎಂಬುದನ್ನು ಕಾಣಬಹುದು.
ಇನ್ನೂ ಈ ಚಿತ್ರಕ್ಕೆ ಸತ್ಯ ರಾಯಲ ಅವರು ಬಂಡವಾಳ ಹೂಡಿದ್ದು, ವಿಖ್ಯಾತ್ ಆರ್ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಅನೂಪ್ ಸಿಳೀನ್ ಸಂಗೀತ, ಹರೀಶ್ ಕೊಮ್ಮೆಯವರ ಸಂಕಲನ ಚಿತ್ರಕ್ಕಿರಲಿದೆ. ಮುಖ್ಯಭೂಮಿಕೆಯಲ್ಲಿ ಗಣೇಶ್ ಮತ್ತು ರಮೇಶ್ ಅರವಿಂದ್ ಇರಲಿದ್ದಾರೆ ಎಂದು ತಿಳಿದುಬಂದಿದೆ. ತಾರಾಗಣದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ ಎಂಬುದನ್ನು ಇನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ.