

‘ಗಾಳಿಪಟ 2’ ಯಶಸ್ಸಿನ ಬಳಿಕ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ತೆರೆಗೆ ಬರಲು ರೆಡಿಯಾಗಿದೆ. ಮಹೇಶ್ ಗೌಡ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರವಿದು. ಇದೇ ಸಂದರ್ಭದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರುವ ಗಣೇಶ್, ‘ಈ ಚಿತ್ರದಲ್ಲಿ ನಾಯಕ ತುಂಬ ಕಿಲಾಡಿ. ರಿಯಲ್ ಎಸ್ಟೇಟ್, ಈಜುಪಟು, ಕ್ರೀಡೆ, ಸಮರಕಲೆ... ಹೀಗೆ ಹಲವು ಕೆಲಸಗಳನ್ನು ಮಾಡುತ್ತಿರುತ್ತಾನೆ. ಚಿತ್ರದಲ್ಲಿ ಯಾವುದು ನಿಜ? ಯಾವುದು ಸುಳ್ಳು? ಯಾಕೆ ಇಷ್ಟು ಜನ ಈತನ ಹಿಂದೆ ಬಿದ್ದಿದ್ದಾರೆ? ಎನ್ನುವುದು ಗೊತ್ತಾಗಬೇಕಾದರೆ ಚಿತ್ರ ನೋಡಬೇಕು. ಚಿತ್ರದಲ್ಲಿ ಫ್ಯಾಮಿಲಿ ಡ್ರಾಮಾ, ಕಾಮಿಡಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್... ಹೀಗೆ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಇದೆ’ ಎಂದು ಮಾಹಿತಿ ನೀಡುತ್ತಾರೆ.
ಇನ್ನು ‘ತ್ರಿಬಲ್ ರೈಡಿಂಗ್’ ಮಾಡುತ್ತಾ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ರಾ? ಎಂದು ಕೇಳಿದರೆ, ‘’ತ್ರಿಬಲ್ ರೈಡಿಂಗ್’ ಅಲ್ಲ, ನಾಲ್ಕು ಜನ ಕುಳಿತು ಬೈಕ್ನಲ್ಲಿ ಓಡಾಡಿದ್ದೂ ಇದೆ. ನೆಲಮಂಗದಲ್ಲಿ ಕಾಲೇಜು ದಿನಗಳಲ್ಲಿ ಥಿಯೇಟರ್, ಆಟದ ಮೈದಾನ ಅಂತ ಬೈಕ್ನಲ್ಲಿ ನಾಲ್ಕು ಜನ ಗೆಳೆಯರು ಪೊಲೀಸರಿಂದ ತಪ್ಪಿಸಿಕೊಂಡು ಗಲ್ಲಿಗಳಲ್ಲಿ ಓಡಾಡುತ್ತಿದ್ದೆವು’ ಎಂದು ನಗುತ್ತಾರೆ. ಚಿತ್ರ ಇದೇ ಡಿ. 25ರಂದು ತೆರೆಗೆ ಬರಲಿದೆ.
ಜಡೆಜಗಳ ಇರಲಿಲ್ಲ!: ಚಿತ್ರದಲ್ಲಿ ಮೂವರು ನಾಯಕಿಯರು. ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್, ಗಣೇಶ್ ಜತೆ ತೆರೆ ಹಂಚಿಕೊಂಡಿದ್ದಾರೆ. ನಾಯಕಿಯರ ನಡುವೆ ಜಗಳವಾಗುತ್ತಿತ್ತಾ? ಅಂದರೆ, ಗಣೇಶ್, ‘ಖಂಡಿತ ಇಲ್ಲ... ಮೂವರು ಒಟ್ಟಿಗೆ ನಟಿಸುವ ಹೆಚ್ಚು ಸನ್ನಿವೇಶಗಳಿರಲಿಲ್ಲ. ಕ್ಲೈಮ್ಯಾಕ್ಸ್ನಲ್ಲಿ ಒಟ್ಟಿಗೆ ಇರುತ್ತಾರಾದರೂ 20 ಜನ ಕಲಾವಿದರು, 500 ಮಂದಿ ಸಹ ಕಲಾವಿದರಿದ್ದರು, ಹೀಗಾಗಿ ಜಗಳ ಆಡಲಿಲ್ಲ’ ಎಂದು ನಗುತ್ತಲೇ ಹೇಳಿಕೊಂಡರು.
ಕಾಂತಾರ ಬ್ಲಾಕ್ಬಸ್ಟರ್...: ‘ಕಾಂತಾರ’ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆ ಮಾತನಾಡುವ ಗಣೇಶ್, ‘ಕನ್ನಡದ ನಟನಾಗಿ ಬಹಳ ಖುಷಿ ಕೊಡುವ ವಿಷಯ. ಎಲ್ಲರೂ ಕನ್ನಡದತ್ತ ತಿರುಗಿ ನೋಡುತ್ತಿದ್ದಾರೆ. ಲವ್ಸ್ಟೋರಿ, ಡ್ರಾಮಾ, ಥ್ರಿಲ್ಲರ್ ಹೀಗೆ ಎಲ್ಲ ಬಗೆಯ ಸಿನಿಮಾಗಳು ಓಡುತ್ತಿವೆ. ‘ಕಾಂತಾರ’ ಬ್ಲಾಕ್ಬಸ್ಟರ್ ಆಗಿದೆ. ನಮ್ಮ ಚಿತ್ರರಂಗದ ಸಿನಿಮಾ ಮಾತ್ರವಲ್ಲ, ‘ಕಾಂತಾರ’ ನನ್ನದೇ ಸಿನಿಮಾ ಎನ್ನುವಷ್ಟು ಖುಷಿಯಿದೆ’ ಎನ್ನುತ್ತಾರೆ. ಇನ್ನು ಇತ್ತೀಚೆಗಷ್ಟೇ 50 ದಿನಗಳನ್ನು ಪೂರೈಸಿದ ‘ಕಾಂತಾರ’ 400 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ.