

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಸೈಬರ್ ವಂಚನೆಗೆ ಒಳಗಾದವರು ‘ಗೋಲ್ಡನ್ ಅವರ್’ನಲ್ಲಿ ಕರೆ ಮಾಡಿ ದೂರು ನೀಡಿದ ಪರಿಣಾಮ 3,431 ಕೋಟಿ ರೂ. ಸೇಫ್ ಆಗಿದೆ. ಜತೆಗೆ ಹಣ ಕಳೆದುಕೊಂಡವರ ಬ್ಯಾಂಕ್ ಖಾತೆಗೆ ವಾಪಸ್ ಕೂಡ ಜಮೆಯಾಗಿದೆ.
ಹೌದು...ತಿಳಿದೋ ತಿಳಿಯದೋ ಸೈಬರ್ ಅಪರಾಧಕ್ಕೆ ಒಳಗಾದರೆ ‘ಗೋಲ್ಡನ್ ಅವರ್’ ಎನ್ನಲಾದ ಕೆಲ ನಿಮಿಷದಲ್ಲಿ ಕೇಂದ್ರ ಸರ್ಕಾರದ ಸೈಬರ್ ಹೆಲ್ಪ್‌ಲೈನ್ 1930ಕ್ಕೆ ಕರೆ ಮಾಡಿ ಸೂಕ್ತ ದಾಖಲೆ ಜತೆಗೆ ದೂರು ನೀಡಿದರೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆ ಬ್ಲಾಕ್ ಆಗಲಿದೆ.
ಸ್ಥಳೀಯ ಪೊಲೀಸ್ ಠಾಣೆಗೆ 1930ಕ್ಕೆ ದೂರು ಸಲ್ಲಿಸಿದ ದೂರಿನ ನಂಬರ್ ಜತೆಗೆ ಹಣಕಾಸಿನ ವ್ಯವಹಾರದ ದಾಖಲೆ ಸಲ್ಲಿಸಿ ದೂರು ಸಲ್ಲಿಸಿದರೆ ಪ್ರಕರಣ ಆಗಲಿದೆ. ಆನಂತರ ಕೋರ್ಟ್ ಅನುಮತಿ ಪಡೆದು ದೂರುದಾರನ ಬ್ಯಾಂಕ್ ಖಾತೆಗೆ ನೇರ ಹಣ ಬರಲಿದೆ. ಸೈಬರ್ ಹೆಲ್ಪ್‌ಲೈನ್ 1930 ನಂಬರ್ ಚಾಲ್ತಿಗೊಂಡು ಮೂರು ವರ್ಷ ಕಳೆದಿದೆ. 9.94 ಲಕ್ಷ ಮಂದಿ ಕರೆ ಮಾಡಿ ದೂರು ಸಲ್ಲಿಸಿದ್ದಾರೆ. ಆದರೆ, ಸೈಬರ್ ಕ್ರೈಂ ಪ್ರಕರಣಕ್ಕೆ ಹೋಲಿಕೆ ಮಾಡಿದರೆ 1930ಕ್ಕೆ ಕರೆ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಕೆಲವೊಂದು ವೇಳೆ ೇಸ್‌ಬುಕ್, ಎಕ್ಸ್, ಇನ್‌ಸ್ಟಾ ಗ್ರಾಮ್ ಸೇರಿ ಜಾಲತಾಣದ ಜಾಹೀರಾತು ನೋಡಿ ಇತ್ತೀಚೆಗೆ ಟ್ರೇಡಿಂಗ್ ವ್ಯವಹಾರ ಮತ್ತು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಕೋಟ್ಯಂತರ ರೂ.ಹಾಕುತ್ತಿದ್ದಾರೆ. ಹೂಡಿಕೆಯಿಂದ ವಂಚನೆಗೆ ಒಳಗಾಗಿರುವುದು ತಿಳಿಯುವಷ್ಟರಲ್ಲಿ ತಿಂಗಳುಗಳೇ ಕಳೆದು ಹೋಗಿರುತ್ತದೆ. ಆ ಸಮಯದಲ್ಲಿ 1930ಕ್ಕೆ ಕರೆ ಮಾಡಿದರೆ ಪ್ರಯೋಜನ ಬರುವುದಿಲ್ಲ. ಅಷ್ಟರಲ್ಲಿ ಸೈಬರ್ ವಂಚಕರು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡಿರುತ್ತಾರೆ ಕರೆನ್ಸಿಗೆ ಬದಲಿಸಿಕೊಂಡು ಲಪಟಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸೈಬರ್ ವಂಚಕರ ಬ್ಯಾಂಕ್ ಖಾತೆ ಜಪ್ತಿ ಮಾಡಿದರೂ ಹಣ ಸಿಗುವುದಿಲ್ಲ. ಆಗಂತ ಸಹಾಯವಾಣಿ 1930ಗೆ ಕರೆ ಮಾಡದಿರುವುದು ತಪ್ಪಾಗಲಿದೆ ಎಂದು ಸೈಬರ್ ತಜ್ಞರ ಸಲಹೆಯಾಗಿದೆ.
6.69 ಲಕ್ಷ ಸಿಮ್ ಕಾರ್ಡ್ ರದ್ದು
ಸೈಬರ್ ಕ್ರೈಂಗಾಗಿ ಬಳಸುತ್ತಿರುವ ಮತ್ತು ನಕಲಿ ದಾಖಲೆ ಆಧಾರದ ಮೇಲೆ ಪಡೆಯುವ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ರದ್ದುಪಡಿಸುತ್ತಿದೆ. ಸೈಬರ್ ಕಳ್ಳರು ಬರುತ್ತಿರುವ ಮಾಹಿತಿ ಮೇರೆಗೆ 6.69 ಲಕ್ಷ ಸಿಮ್ ಕಾರ್ಡ್, ಮೊಬೈಲ್‌ನ 1.32 ಲಕ್ಷ ಐಎಂಇಐ ನಂಬರ್‌ಗಳನ್ನು ರದ್ದಪಡಿಸಿದೆ. ಈ ಬಗ್ಗೆಯೂ ಆನ್‌ಲೈನ್‌ನಲ್ಲಿ ದೂರು ಕೊಡಬಹುದು.
59 ವಾಟ್ಸ್‌ಆ್ಯಪ್ ಗ್ರೂಪ್ ಬ್ಯಾನ್ :
ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಟ್ರೇಡಿಂಗ್ ಮತ್ತು ಬೆದರಿಕೆ, ಅಶ್ಲೀಲ ೆಟೋ ಹಾಕಿ ಬೆದರಿಕೆ ಸೇರಿ ಸೈಬರ್ ಕ್ರೈಂ ನಡೆಯುತ್ತಿದ್ದ 59 ಸಾವಿರ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಕೇಂದ್ರ ಗೃಹ ಇಲಾಖೆ ಬ್ಲಾಕ್ ಮಾಡಿದೆ. ಅದೇ ರೀತಿಯಾಗಿ ಡಿಜಿಟಲ್ ಅರೆಸ್ಟ್‌ಗೆ ಬಳಸುತ್ತಿರುವ 1,700 ಸ್ಕೈಪ್ ಐಡಿಗಳನ್ನು ಪತ್ತೆ ಮಾಡಿ ನಿರ್ಬಂಧಿಸಿದೆ. ಈ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಸಾರ್ವಜನಿಕರು ಸೈಬರ್ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು. ವಂಚನೆಗೆ ಒಳಗಾದ ಕೂಡಲೇ ದೂರು ಕೊಡಬೇಕೆಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.