ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ನಡಿಗೆ, ಚೀಲದೊಳಗೆ ಸಿಕ್ಕಿತು ಕದ್ದ ಬಂಗಾರ

ಬಂಧಿತ ಆರೋಪಿ ಆಸಿಫ್ ಪಿ.ಎಚ್.
ಬಂಧಿತ ಆರೋಪಿ ಆಸಿಫ್ ಪಿ.ಎಚ್.
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಗಿನಲ್ಲಿತ್ತು 13.06 ಲಕ್ಷ ರೂ.ಮೌಲ್ಯದ ಸ್ವರ್ಣ
  • ತ್ರಿಶೂರಿನಿಂದ ಎಗರಿಸಿದ್ದ ಖದೀಮ
  • ವಿಶೇಷ ಕಣ್ಗಾವಲು ಕಾರ್ಯಾಚರಣೆ ಸಂದರ್ಭ ಬಲೆಗೆ ಬಿದ್ದ ಆರೋಪಿ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ರೈಲ್ವೇ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಮೂಲಕ ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳನನ್ನು ಬಂಧಿಸಿರುವ ಅಧಿಕಾರಿಗಳು ಆತನಿಂದ 13 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ಮೂಲದ ಆಸಿಫ್ ಪಿ.ಎಚ್.(25) ಬಂಧಿತ ಆರೋಪಿ. ಆರ್‌ಪಿಎಫ್ ಇನ್ಸ್‌ಪೆಕ್ಟರ್ ಮನೋಜ್ ಕುವಾರ್ ಯಾದವ್ ನೇತೃತ್ವದ ತಂಡ ಗುರುವಾರ ರೈಲ್ವೇ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ವಿಶೇಷ ಕಣ್ಗಾವಲು ಕಾರ್ಯಾಚರಣೆ ಸಂದರ್ಭದಲ್ಲಿ ಈತ ಬಲೆಗೆ ಬಿದ್ದಿದ್ದಾನೆ.
ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅನುವಾನಾಸ್ಪದವಾಗಿ ಓಡಾಡುತ್ತಿದ್ದ ಆಸಿಫ್ನನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆತನ ಹೆಗಲ ಮೇಲಿದ್ದ ಚೀಲವನ್ನು ತಪಾಸಣೆ ನಡೆಸಿದಾಗ ಚಿನ್ನಾಭರಣಗಳು ಪತ್ತೆಯಾಗಿದೆ. ಈ ಆಭರಣಗಳನ್ನು ಕೇರಳದ ತ್ರಿಶೂರ್ ಜಿಲ್ಲೆಯ ಮನೆಯೊಂದರಿಂದ ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ನಂತರ ನಡೆದ ಪೊಲೀಸ್ ಪರಿಶೀಲನೆಯಲ್ಲಿ, ತ್ರಿಶೂರ್‌ನ ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಮೇ 6ರಂದು ಮನೆಯೊಂದರಿಂದ 10 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ವಶಪಡಿಸಿಕೊಂಡ ಆಭರಣಗಳು ಇದೇ ಪ್ರಕರಣಕ್ಕೆ ಸಂಬಂಧಿಸಿವೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ 13.06 ಲಕ್ಷ ರೂ. ಅಂದಾಜಿಸಲಾಗಿದೆ.
ಪಾವರಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಮೇ 8ರ ಮುಂಜಾನೆ ಮಂಗಳೂರು ಆರ್‌ಪಿಎಫ್ ಕಚೇರಿಗೆ ಆಗಮಿಸಿ, ಆರೋಪಿ ಮತ್ತು ವಶಪಡಿಸಿಕೊಂಡ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net