ದೇಶಾದ್ಯಂತ ಚಿನ್ನದ ಸ್ಮಗ್ಲಿಂಗ್ ನಿರಾತಂಕ!: ಎರಡೂವರೆ ವರ್ಷದಲ್ಲಿ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಬಂಗಾರ ಜಪ್ತಿ

kerthi sir
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಬಂಗಾರದ ಬೆಲೆ ದಿನೇದಿನೆ ಗಗನಕ್ಕೇರುತ್ತಿರುವ ನಡುವೆಯೇ ಭಾರತದಲ್ಲಿ ಚಿನ್ನದ ಸ್ಮಗ್ಲಿಂಗ್ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭದ್ರತಾ ಪಡೆಗಳ ಕಣ್ಗಾವಲನ್ನೇ ಕಣ್ತಪ್ಪಿಸಿ ವಿದೇಶಗಳಿಂದ ದೇಶಕ್ಕೆ ಬರುತ್ತಿರುವ ಚಿನ್ನದ ಕಳ್ಳಸಾಗಣೆ ದಂಧೆಗೆ ಪೂರ್ಣಪ್ರಮಾಣದ ಕಡಿವಾಣ ಹಾಕಲಾಗಿಲ್ಲ. ಏರ್​ಪೋರ್ಟ್​ಗಳಲ್ಲೇ ವಾರ್ಷಿಕ ಸರಾಸರಿ 3500 ಕೆ.ಜಿಗೂ ಅಧಿಕ ಚಿನ್ನ ಜಪ್ತಿಯಾಗುತ್ತಿರುವುದು ಈ ದಂಧೆ ಮಿತಿಮೀರುತ್ತಿದೆ ಎಂಬುದಕ್ಕೆ ತಾಜಾ ಸಾಕ್ಷಿ. ಸರ್ಕಾರದ ಖಜಾನೆ ಸೇರಬೇಕಾಗಿರುವ ಸಾವಿರಾರು ಕೋಟಿ ರೂ. ತೆರಿಗೆ ಹಣ ಬಂಗಾರದ ದಂಧೆಕೋರರ ಜೇಬು ಸೇರುತ್ತಿದೆ.

ಆರ್ಥಿಕ ಇಲಾಖೆ ಮಾಹಿತಿ ಪ್ರಕಾರ ವಾಯು ಮಾರ್ಗ ಹಾಗೂ ಸಮುದ್ರ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಹಾಗೂ ಕಸ್ಟಮ್್ಸ ಅಧಿಕಾರಿಗಳು 2021ರಿಂದ 2024ರ ಜೂನ್​ವರೆಗೆ ವಿಮಾನ ನಿಲ್ದಾಣಗಳಲ್ಲೇ 8577 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ. ಮುಟ್ಟುಗೋಲು ಹಾಕಿಕೊಂಡಿರುವ ಚಿನ್ನದ ಮೌಲ್ಯ ಬರೋಬ್ಬರಿ 4577 ಕೋಟಿ ರೂ. ಇದೆ. ಕರ್ನಾಟಕ, ಚೆನ್ನೈ, ಕೇರಳ, ಮುಂಬೈ, ದೆಹಲಿ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ವಾರಕ್ಕೆ ಕನಿಷ್ಠ 4 ಪ್ರಕರಣ ವರದಿಯಾಗುತ್ತವೆ. ರಾಜ್ಯದಲ್ಲಿ ಐದು ವರ್ಷದಲ್ಲಿ 922 ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಪತ್ತೆಯಾಗಿದ್ದು, ಪ್ರತಿವರ್ಷ ಸರಾಸರಿ 167 ಪ್ರಕರಣಗಳು ಬೆಳಕಿಗೆ ಬರುತ್ತವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಕಣ್ತಪ್ಪಿಸುವರೇ ಹೆಚ್ಚು: ಶೇ.100 ಚಿನ್ನ ಕಳ್ಳಸಾಗಾಣೆ ಪ್ರಕರಣಗಳಲ್ಲಿ ತನಿಖಾ ತಂಡಗಳ ಕೈಗೆ ಸಿಕ್ಕಿಬೀಳುವ ಪ್ರಕರಣಗಳ ಸಂಖ್ಯೆ ಬರೀ ಶೇ.25 ರಿಂದ 40. ಉಳಿದಂತೆ ಭದ್ರತಾ ಅಧಿಕಾರಿಗಳ ಕಣ್ತಪ್ಪಿಸಿ ಬೇರೆಬೇರೆ ರೂಪದಲ್ಲಿ ಮಾರುಕಟ್ಟೆಗೆ ಸೇರುತ್ತದೆ. ಪ್ರಸ್ತುತ ಕೆಲವೊಂದು ಭದ್ರತಾ ಕ್ರಮ ಹೆಚ್ಚಿಸಿರುವುದರಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮೊದಲು ಶೇ.100ರಲ್ಲಿ ಶೇ.5 ಪ್ರಕರಣಗಳಲ್ಲಿ ಮಾತ್ರವೇ ಆರೋಪಿಗಳು ಸಿಕ್ಕಿಬೀಳುತ್ತಿದ್ದರು.

ಚಿನ್ನದ ಮೇಲಿನ ಸುಂಕರಹಿತ ಮಿತಿ ನಿಯಮದ ಪ್ರಕಾರ ದುಬೈ ಅಥವಾ ಬೇರೆ ದೇಶಗಳಿಂದ ಭಾರತಕ್ಕೆ ಪ್ರಯಾಣಿಸುವ ವ್ಯಕ್ತಿಯೊಬ್ಬ 50 ಸಾವಿರ ರೂ. ಮೀರದಂತೆ ಗರಿಷ್ಠ 20 ಗ್ರಾಂ ಚಿನ್ನ ತರಬಹುದು. ಅದೇ ರೀತಿ ಮಹಿಳೆಯೊಬ್ಬರು 1 ಲಕ್ಷ ರೂ. ಮೀರದಂತೆ ಗರಿಷ್ಠ 40 ಗ್ರಾಂ ಚಿನ್ನ ಕೊಂಡೊಯ್ಯಲು ಅವಕಾಶ ಇದೆ. ಇದಕ್ಕಿಂತ ಹೆಚ್ಚು ತರಬೇಕಾದರೆ ನಿಗದಿತ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1 ಕೆಜಿಗೆ 5 ಲಕ್ಷ ರೂ. ಕಮಿಷನ್!: ವಿದೇಶಗಳಿಂದ ಚಿನ್ನ ಕಳ್ಳಸಾಗಾಣಿಕೆಗಾಗಿಯೇ ಬೇರೆಬೇರೆ ಸಿಂಡಿಕೇಟ್ ರೂಪಿಸಿಕೊಳ್ಳಲಾಗಿದೆ. ಕಳ್ಳಮಾರ್ಗದಲ್ಲಿ 1 ಕೆಜಿ ಚಿನ್ನವನ್ನು ಭಾರತಕ್ಕೆ ಯಶಸ್ವಿಯಾಗಿ ತಂದರೆ 5 ಲಕ್ಷ ರೂ. ಕಮಿಷನ್ ಕೊಡಲಾಗುತ್ತದೆ. ಅಲ್ಲದೆ, ಏರ್​ಪೋರ್ಟ್​ಗಳಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ದಂಧೆಗೆ ಕೈಜೋಡಿಸಿ ಕಳ್ಳಸಾಗಾಣೆಗೆ ನೆರವು ಕೊಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕಸ್ಟಮ್್ಸ ಅಧಿಕಾರಿಗಳೇ ಬೇರೆಬೇರೆ ಪ್ಯಾಕೇಜ್​ಗಳ ರೂಪದಲ್ಲಿ ಲಂಚ ಪಡೆದು ಸ್ಮಗ್ಲಿಂಗ್​ಗೆ ಸಹಾಯ ಮಾಡಿದ್ದ ವಿಚಾರ 2019ರಲ್ಲಿ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆಗ ಕಸ್ಟಮ್್ಸ ವಿಭಾಗದ ಎಸ್ಪಿ ವಿರುದ್ಧವೇ ದೂರು ದಾಖಲಾಗಿತ್ತು.

2000 ಮಂದಿ ಪ್ರಾಸಿಕ್ಯೂಟೆಡ್: 2021ರಿಂದ 2024ರ ಜೂನ್​ವರೆಗೆ 1422 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪ್ರಕ್ರಿಯೆ ಆರಂಭಿಸಲಾಗಿದೆ. 2151 ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಇದೇ ಅವಧಿಯಲ್ಲಿ ಸೀ ಪೋರ್ಟ್​ಗಳಲ್ಲಿ ಪತ್ತೆಯಾದ 1 ಪ್ರಕರಣದಲ್ಲಿ ಮಾತ್ರ ಪ್ರಾಸಿಕ್ಯೂಷನ್ ಪ್ರಕ್ರಿಯೆ ಆರಂಭಿಸಿದ್ದು, ನಾಲ್ವರು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಯಾವ ದೇಶದಿಂದ ಕಳ್ಳಸಾಗಣೆ?: ಅರಬ್ ದೇಶಗಳಿಂದ ಅತಿಹೆಚ್ಚು ಚಿನ್ನ ಅಕ್ರಮವಾಗಿ ಬರುತ್ತೆ. ಉಳಿದಂತೆ ಮಯನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಿಂದಲೂ ಬರುತ್ತದೆ. ಪತ್ತೆಯಾಗಿರುವ ಶೇ.40 ಪ್ರಕರಣ ಗಳು ಅರಬ್ ದೇಶಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು.

1 ಕೆಜಿಗೆ -ಠಿ;5 ಲಕ್ಷ ಕಮಿಷನ್!: ವಿದೇಶಗಳಿಂದ ಚಿನ್ನ ಕಳ್ಳಸಾಗಣಿಕೆಗಾಗಿಯೇ ಬೇರೆ ಬೇರೆ ಸಿಂಡಿಕೇಟ್ ರೂಪಿಸಿಕೊಳ್ಳಲಾಗಿದೆ. ಕಳ್ಳಮಾರ್ಗ ದಲ್ಲಿ 1 ಕೆಜಿ ಚಿನ್ನವನ್ನು ಭಾರತಕ್ಕೆ ಯಶಸ್ವಿಯಾಗಿ ತಂದರೆ 5 ಲಕ್ಷ ರೂ. ಕಮಿಷನ್ ಕೊಡಲಾಗುತ್ತದೆ. ಏರ್​ಪೋರ್ಟ್​ಗಳಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ದಂಧೆಗೆ ಕೈಜೋಡಿಸಿ ಕಳ್ಳಸಾಗಣೆಗೆ ನೆರವು ಕೊಡುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಹೇಗೆ ಸ್ಮಗ್ಲಿಂಗ್ ಮಾಡ್ತಾರೆ?

* ಸ್ಯಾನಿಟರಿ ನ್ಯಾಪ್ಕಿನ್​ನಲ್ಲಿ ಅಡಗಿಸುತ್ತಾರೆ

* ಪಾದದ ಕೆಳಗೆ ಅಂಟಿಸಿ, ಶೂ ಧರಿಸುವುದು

* ಚಿನ್ನ ಕರಗಿಸಿ, ಬಿಸ್ಕತ್​ಗಳಾಗಿ ಮಾಡುತ್ತಾರೆ

* ಸೋಪು, ಟೂತ್​ಬ್ರೆಶ್, ಪುಸ್ತಕದಲ್ಲಿ ತುಂಬುತ್ತಾರೆ

* ಒಳ ಉಡುಪು, ಗುದದ್ವಾರದಲ್ಲಿ ಬಚ್ಚಿಟ್ಟುಕೊಳ್ತಾರೆ

* ಟ್ರಾಲಿ ಬ್ಯಾಗ್ ಚಕ್ರ ಹಾಗೂ ರಾಡ್​ಗಳಲ್ಲಿಡುತ್ತಾರೆ

* ಬ್ಯಾಗ್​ ಬಕಲ್ಸ್, ಪ್ಯಾಂಟ್ ಬಟನ್​ನಲ್ಲಿಡುತ್ತಾರೆ

*  ತಲೆಕೂದಲಿನ ವಿಗ್​ನ ಒಳಭಾಗದಲ್ಲಿಡುತ್ತಾರೆ

* ಗುಳಿಗೆ ರೂಪದಲ್ಲಿ ಹೊಟ್ಟೆಯೊಳಗೆ ನುಂಗುತ್ತಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net