

ಚಾಮರಾಜನಗರ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಕಚೇರಿ ಎದುರಿನ ಮನೆಯಲ್ಲಿ ಭಾರಿ ಕಳ್ಳತನವಾದ ಘಟನೆ ವರದಿಯಾಗಿದ್ದು, ದುಬಾರಿ ವಸ್ತುಗಳು ಕಳ್ಳರ ಪಾಲಾಗಿದೆ.
ಕುಮಾರ್ ಎಂಬುವವರು ಮನೆಯಲ್ಲಿದ್ದ ಮುಕ್ಕಾಲು ಕೆಜಿ ಚಿನ್ನ, 15 ಕೆಜಿ ಬೆಳ್ಳಿ ಮತ್ತು 5.50 ಲಕ್ಷ ರೂ ನಗದನ್ನು ಕಳ್ಳರ ಗ್ಯಾಂಗ್ ಲಪಟಾಯಿಸಿ, ಪರಾರಿಯಾಗಿರುವುದು ಪತ್ತೆಯಾಗಿದೆ.
ಮನೆಯಲ್ಲಿದ್ದ ಚಿನ್ನ, ಬೆಳ್ಳಿಯನ್ನು ಮಾತ್ರ ಕಳ್ಳತನ ಮಾಡದ ಖದೀಮರು, ಒಂದು ಟ್ಯಾಬ್ ಹಾಗು ಒಂದು ಮೊಬೈಲ್ ಫೋನ್ ಸಹ ಕಳ್ಳತನ ಮಾಡಿದ್ದಾರೆ ಎಂದು ಕುಮಾರ್ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಯವರು ಊರಿಗೆ ಹೋಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭವನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ ದುಬಾರಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.