

ನವದೆಹಲಿ: ಚಿನ್ನಕ್ಕೆ ಚಿನ್ನವೇ ಸಾಟಿ. ಕರೊನಾ ವೈರಸ್ ತಟ್ಟಿದರೂ, ಆರ್ಥಿಕ ಕುಸಿತ ಉಂಟಾದರೂ, ಕೆಲವೊಂದು ಹಬ್ಬದ ದಿನಗಳಲ್ಲಿ ಅದರಲ್ಲಿಯೂ ಅಕ್ಷಯ ತೃತೀಯದಂಥ ದಿನಗಳಲ್ಲಿ ಚಿನ್ನದ ಷೋರೂಂಗಳಿಗೆ ಲಗ್ಗೆ ಇಡುವುದನ್ನು ನೋಡಿದರೆ, ನಿಜವಾಗಿಯೂ ಆರ್ಥಿಕ ಕುಸಿತವಾಗಿರುವುದು ಹೌದಾ ಎಂಬ ಪ್ರಶ್ನೆ ಉಂಟಾಗುತ್ತದೆ.
ಅದು ಚಿನ್ನಕ್ಕಿರುವ ಡಿಮಾಂಡ್. ಅದೇನೇ ಇರಲಿ. ಈಗಂತೂ ಕರೊನಾ ವೈರಸ್, ಲಾಕ್‌ಡೌನ್ ಎಂದೆಲ್ಲಾ ಸಂಕಷ್ಟಕ್ಕೆ ಇರುವ ಮಂದಿ ಇದೆಲ್ಲಾ ಸಮಸ್ಯೆ ಮುಗಿದ ಮೇಲೆ ಚಿನ್ನ ಖರೀದಿ ಮಾಡುವ ಪ್ಲ್ಯಾನ್ ಹಾಕಿಕೊಂಡಿರಲು ಸಾಕು.
ಹೀಗೇನಾದರೂ 2021ಕ್ಕೆ ಖರೀದಿಗೆ ಮುಂದಾಗುವ ಪ್ಲ್ಯಾನ್ ಇದ್ದರೆ ಅದನ್ನು ಇಲ್ಲಿಯೇ ನಿಲ್ಲಿಸಿಬಿಡಿ. ಏಕೆ ಗೊತ್ತಾ? ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರೀಟಿಸ್ ನೀಡಿರುವ ವರದಿಯ ಪ್ರಕಾರ, 2021ರ ಅಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆಯು 82 ಸಾವಿರ ರೂಪಾಯಿಗೆ ಏರಲಿದೆಯಂತೆ!
ಕರೊನಾ ವೈರಸ್ ಹಾಗೂ ಆನಂತರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಷೇರು ಮತ್ತು ಬಾಂಡ್‌ಗಳಲ್ಲಿನ ಹೂಡಿಕೆ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ, ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಬಂಗಾರದತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ. ಆದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 2.28 ಲಕ್ಷ ರೂಪಾಯಿಗೆ ತಲುಪಲಿದೆ. ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಕಾರಣ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ ಎನ್ನಲಾಗಿದೆ.
2020ರ ಆರಂಭದ ಅವಧಿಯಲ್ಲಿ ಮುಂಬೈನಲ್ಲಿ 10 ಗ್ರಾಂ ಚಿನ್ನದ ದರ 39,100 ರೂಪಾಯಿ ಇತ್ತು. ಮಾರ್ಚ್ ಮೊದಲ ವಾರದಲ್ಲಿ ಇದು 43,800 ರೂಪಾಯಿಗೆ ಏರಿತು. ಏಪ್ರಿಲ್ ಅಂತ್ಯದಲ್ಲಿ 45,500 ರೂಪಾಯಿ ಆಗಿದ್ದು, ಇದೀಗ 52,550 ರೂಪಾಯಿ ಆಗಿದೆ. ಇನ್ನೂ ಒಂದೂವರೆ ವರ್ಷದಲ್ಲಿ ಚಿನ್ನದ ದರ ಡಬಲ್ ಆಗಲಿದೆ. 2021ರ ಅಂತ್ಯದ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 82 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.