

ನವದೆಹಲಿ: ಕಳೆದ ಒಂದು ವಾರದಿಂದ ಅಂದರೆ ದೀಪಾವಳಿ ಹಬ್ಬದ ಬಳಿಕ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು (Gold) ಸತತವಾಗಿ ಕುಸಿತ ಕಾಣುತ್ತಿದೆ. ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನ-ಬೆಳ್ಳಿ ದರಗಳು ಇದೀಗ ದಿನ ಕಳೆದಂತೆ ಇಳಿಕೆಯತ್ತ ಸಾಗುತ್ತಿದೆ. ಸದ್ಯ ಈ ಸುದ್ದಿ ಗೋಲ್ಡ್ ಪ್ರಿಯರಲ್ಲಿ ಭಾರೀ ಸಂತಸ ಮೂಡಿಸಿದೆ.
ಸೋಮವಾರ (ಅ.27) ಸಂಜೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ. ಅಮೆರಿಕನ್ ಡಾಲರ್ ಬಲಗೊಳ್ಳುವುದು ಮತ್ತು ಯುಎಸ್-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಚಿನ್ನದ ಮೇಲೆ ತೀವ್ರ ಒತ್ತಡ ಹೇರಿವೆ. ಸೋಮವಾರ, ಒಂದು ಔನ್ಸ್ (31.10 ಗ್ರಾಂ) ಗೋಲ್ಡ್ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ 115 ಡಾಲರ್ಗಿಂತ ಹೆಚ್ಚು ಕುಸಿದು 3,994 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಆದಾಗ್ಯೂ, ದೇಶೀಯವಾಗಿ ಡಾಲರ್ 36 ಪೈಸೆ ಏರಿಕೆಯಾದರೂ, ದೇಶೀಯ ಚಿನ್ನದ ಬೆಲೆ ಆ ಮಟ್ಟದಲ್ಲಿ ಇಳಿಕೆ ಕಂಡಿಲ್ಲ.
ಭಾರತದಲ್ಲಿ ಕಳೆದ 10 ದಿನಗಳಲ್ಲಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 9,000 ರೂ. ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಉದ್ವಿಗ್ನತೆ ಕಡಿಮೆಯಾಗಿರುವುದರಿಂದ, ಸ್ವರ್ಣದ ದರ ಕ್ರಮೇಣವಾಗಿ ಕುಸಿಯುತ್ತಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ಇಳಿಕೆಯತ್ತ ಮುಖಮಾಡಿದೆ. ಕಳೆದ 10 ದಿನಗಳಲ್ಲಿ, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 30,000 ರೂ.ಗಿಂತ ಜಾಸ್ತಿ ಕುಸಿದಿದೆ. ಪ್ರಸ್ತುತ, ಒಂದು ಕೆಜಿ ಬೆಳ್ಳಿಯ ದರ 1,56,900 ರೂ. ಆಗಿದೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆ: ಯುಕ್ರೇನ್ ಯುದ್ಧದ ಬಳಿಕ ರಷ್ಯಾದ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ರೋಸ್ನೆಫ್ಟ್ ಮೇಲೆ ಯುಎಸ್ ನಿರ್ಬಂಧಗಳ ಪರಿಣಾಮ.
ಯುಎಸ್-ಚೀನಾ ವ್ಯಾಪಾರ ಮಾತುಕತೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಮಾರುಕಟ್ಟೆಯ ಮೇಲೆ ಪರಿಣಾಮ.
ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ವರದಿ: ಹೂಡಿಕೆದಾರರು ಪ್ರಸ್ತುತ ಈ ವರದಿಯ ಮೇಲೆ ಕೇಂದ್ರೀಕರಿಸಿದ್ದಾರೆ. ಸೆಪ್ಟೆಂಬರ್ ಕೋರ್ ಹಣದುಬ್ಬರವು ಶೇ.3.1ರಷ್ಟು ಸ್ಥಿರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಫೆಡರಲ್ ರಿಸರ್ವ್ ಬಡ್ಡಿದರ ನಿರೀಕ್ಷೆ: ಅಮೆರಿಕದಲ್ಲಿ ತಾತ್ಕಾಲಿಕ ಸ್ಥಗಿತದಿಂದಾಗಿ ದರ ಕಡಿತದ ಘೋಷಣೆ ವಿಳಂಬವಾಗಿದ್ದರೂ, ಹೂಡಿಕೆದಾರರು ಮುಂದಿನ ಫೆಡರಲ್ ರಿಸರ್ವ್ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ದರ ಕಡಿತದ ಮುನ್ಸೂಚನೆಯನ್ನು ಈಗಾಗಲೇ ನೀಡುತ್ತಿದ್ದಾರೆ. ಈ ಎಲ್ಲ ಅಂಕಿಅಂಶಗಳು ಸತತ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ,(ಏಜೆನ್ಸೀಸ್).