

ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಾಗಿದ್ದರ ಪರಿಣಾಮವಾಗಿ, ರಾಷ್ಟ್ರ ರಾಜಧಾನಿಯಲ್ಲಿ ಸತತ ಐದನೇ ದಿನವಾದ ಮಂಗಳವಾರವೂ ಚಿನ್ನದ ಬೆಲೆಯಲ್ಲಿ 500 ರೂ.ನಷ್ಟು ಏರಿಕೆಯಾಗಿದೆ.
ಶೇಕಡ 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ ಸೋಮವಾರ 85,300 ರೂ. ಇದ್ದದ್ದು ಮಂಗಳವಾರ 85,800 ರೂ.ಗೆ ತಲುಪಿದೆ. ಶೇಕಡ 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 84,900 ರೂ. ಇದ್ದದ್ದು ಮಂಗಳವಾರ 85,400 ರೂ.ಗೆ ಮುಟ್ಟಿದೆ. ಒಟ್ಟಾರೆ, ಜ. 1ರಿಂದ ಈವರೆಗೆ 10 ಗ್ರಾಂ ಚಿನ್ನದ ದರ 6,410 ರೂ.ನಷ್ಟು, ಅಂದರೆ ಶೇಕಡ 8ರಷ್ಟು ಏರಿಕೆ ಆದಂತಾಗಿದೆ. ಬೆಳ್ಳಿಯ ಬೆಲೆ ಮಂಗಳವಾರ ಕೆಜಿಗೆ 500 ರೂ. ಇಳಿಕೆಯಾಗಿ, 95,500 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.