

ನವದೆಹಲಿ: ದುರ್ಬಲಗೊಳ್ಳುತ್ತಿರುವ ಡಾಲರ್ ಮತ್ತು ಅಮೆರಿಕ- ಚೀನಾ ವ್ಯಾಪಾರ ಸಮರದಿಂದ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಒಮ್ಮೆಲೇ 1,650 ರೂ. ಏರಿಕೆಯಾಗಿ 10 ಗ್ರಾಂಗೆ 99,800 ರೂ.ಗೆ ತಲುಪಿದೆ.
ಶುಕ್ರವಾರದ ವಹಿವಾಟಿನಲ್ಲಿ ಶೇ. 99.9ರಷ್ಟು ಶುದ್ಧತೆಯ ಈ ಚಿನ್ನ 98,150 ರೂ.ಗೆ ಮಾರಾಟವಾಗಿತ್ತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಶುಕ್ರವಾರ 97,700 ರೂ. ಇದ್ದದ್ದು 1,600 ರೂ. ಏರಿಕೆಯಾಗುವ ಮೂಲಕ 99,300 ರೂ.ಗೆ ತಲುಪಿದೆ.
ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಜ. 1ರಿಂದ ಇಲ್ಲಿಯವರೆಗೆ ಬಂಗಾರದ ಬೆಲೆ 20,850 ರೂ.ನಷ್ಟು (ಶೇ. 26.41) ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆಯೂ ಸೋಮವಾರ 500 ರೂ.ನಷ್ಟು ಏರಿಕೆಯಾಗಿ 98,500 ರೂ.ಗೆ ತಲುಪಿದೆ.