

ನವದೆಹಲಿ: ಚಿನ್ನ, ಬೆಳ್ಳಿಯ ಖರೀದಿದಾರರಿಗೆ ಕೇಂದ್ರ ಬಜೆಟ್ನಿಂದ ಭರ್ಜರಿ ಉಡುಗೊರೆಯೇ ಸಿಕ್ಕಿದೆ. 2024-25ರ ಬಜೆಟ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡ 15ರಿಂದ ಶೇ.6ಕ್ಕೆ ಇಳಿಸಲಾಗಿದೆ. ಪ್ಲಾಟಿನಂ ಮೇಲಿನ ಸುಂಕವನ್ನು ಶೇ.15.4ರಿಂದ ಶೇ.6.4ಕ್ಕೆ ಕಡಿತಗೊಳಿಸಲಾಗಿದೆ. ಈ ಕ್ರಮದಿಂದ ಮಂಗಳವಾರ ಮತ್ತು ಬಜೆಟ್ ಮಂಡನೆಯ ಮರುದಿನ ಬುಧವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರೀ ಕುಸಿತ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇನ್ನಷ್ಟು ಇಳಿಮುಖವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಂಗೆ 4000 ರೂ.ಗಳಷ್ಟು ಕಡಿಮೆಯಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಬುಧವಾರ ಸಂಜೆ ವೇಳೆಗೆ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 650 ರೂ. ಕಡಿಮೆಯಾಗಿ, 68,791 ರೂ.ಗೆ ಸ್ಥಿರಗೊಂಡಿದೆ. ಮಂಗಳವಾರ ಚಿನ್ನದ ದರ 10 ಗ್ರಾಂಗೆ 3,350 ರೂ. ಕಡಿಮೆಯಾಗಿತ್ತು. ಎರಡು ದಿನದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 3500 ರೂ. ಇಳಿಕೆಯಾಗಿದ್ದು, 88,000 ರೂ.ಗೆ ತಗ್ಗಿದೆ. ಕಳೆದ 5 ದಿನಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 8,000 ರೂ. ಕುಸಿದಿರುವುದು ಗಮನಾರ್ಹ.
ರೀಟೇಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ: ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ದರ 2750 ರೂ. ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 64,950 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಈ ಮೂಲಕ ಸತತ ಐದನೇ ದಿನವೂ ಚಿನ್ನದ ದರ ಇಳಿಕೆಯಾದಂತಾಗಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 2990 ರೂ. ಕುಸಿದಿದ್ದು, 70,860ಕ್ಕೆ ಇಳಿದಿದೆ. ಬೆಂಗಳೂರಲ್ಲಿ 1 ಕೆಜಿ ಬೆಳ್ಳಿ ಬೆಲೆ 3500 ರೂ. ಇಳಿಕೆಯಾಗಿದ್ದು, 92,500 ರೂ.ಗೆ ಕುಸಿದಿದೆ.
ಮುಂಬೈ: ಕೇಂದ್ರ ಬಜೆಟ್ ಮಂಡನೆಯ ದಿನವಾದ ಜುಲೈ 23ರಂದು ಕೊಂಚ ಕುಸಿದಿದ್ದ ಷೇರುಪೇಟೆ, ಬುಧವಾರವೂ ಕುಸಿತ ಕಂಡಿತು. ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 280 ಅಂಕ ಇಳಿಕೆಯಾಗಿ (0.35%), 80,148ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 65 (0.27%) ಅಂಕ ಕುಸಿತ ಕಂಡು. 24,413ಕ್ಕೆ ಸ್ಥಿರಗೊಂಡಿತು. ಸೆನ್ಸೆಕ್ಸ್ನ 30 ಷೇರುಗಳ ಪೈಕಿ 20 ನಷ್ಟ ಕಂಡರೆ, 10 ಲಾಭ ಮಾಡಿವೆ. ನಿಫ್ಟಿಯ 50 ಷೇರುಗಳಲ್ಲಿ 30 ಏರಿಕೆ, 20 ಇಳಿಕೆ ದಾಲಿಸಿವೆ. ನಿಫ್ಟಿಯಲ್ಲಿ ಎಚ್ಡಿಎಫ್ಸಿ ಲೈಫ್, ಟೆಕ್ ಮಹೀಂದ್ರಾ, ಬಿಪಿಸಿಎಲ್ ಏರಿಕೆ ದಾಖಲಿಸಿದ್ದು, ಬಜಾಜ್ ಫಿನ್ಸರ್ವ್, ಬ್ರಿಟಾನಿಯಾ ಇಳಿಕೆ ಕಂಡಿವೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) 2023-24ನೇ ಆರ್ಥಿಕ ವರ್ಷದಲ್ಲಿ 5,371 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಬುಧವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2022-23ರಲ್ಲಿ ಬಿಎಸ್ಎನ್ಎಲ್ 8,161 ಕೋಟಿ ರೂ. ನಷ್ಟ ಅನುಭವಿಸಿತ್ತು. ಬಿಎಸ್ಎನ್ಎಲ್ ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್ (ಎಂಟಿಎನ್ಎಲ್) ಪುನರುಜ್ಜೀವನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಿದೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ 4ಜಿ ತಂತ್ರಜ್ಞಾನ ಅನುಷ್ಠಾನಕ್ಕೆ ಬಿಎಸ್ಎನ್ಎಲ್ 1 ಲಕ್ಷ ಪ್ರದೇಶಗಳಲ್ಲಿ 4ಜಿ ಟವರ್ಗಳನ್ನು ಅಳವಡಿಸಲು ನಿರ್ಧರಿಸಿದೆ. ಈ ಉಪಕರಣಗಳನ್ನು 5ಜಿ ಸೇವೆ ಒದಗಿಸುವಂತೆ ಅಪ್ಡೇಟ್ ಮಾಡಲು ಸಾಧ್ಯ ಎಂದು ಪೆಮ್ಮಸಾನಿ ಚಂದ್ರಶೇಖರ್ ವಿವರಿಸಿದ್ದಾರೆ.