

ಪುಣೆ: ಸದಾ ಮೈತುಂಬಾ ಚಿನ್ನಾಭರಣ ಹಾಗೂ ಚಿನ್ನದ ಬಣ್ಣದ ಐಷಾರಾಮಿ ಕಾರು (Golden Guys Car) ಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸೆನ್ಸೆಷನ್ ಸೃಷ್ಟಿಸಿರುವ ಪುಣೆಯ 'ಗೋಲ್ಡನ್ ಗೈಸ್' (Golden Guys) ಖ್ಯಾತಿಯ ಸಂಜಯ್ ಗುಜರ್ ಮತ್ತು ಸನ್ನಿ ವಾಘ್ಚೌರೆ ಈಗ ಸಂಚಾರ ಪೊಲೀಸರ ಅತಿಥಿಗಳಾಗಿದ್ದಾರೆ. ಪಿಂಪ್ರಿ-ಚಿಂಚ್‌ವಾಡ್ ರಸ್ತೆಯಲ್ಲಿ ಕಾರನ್ನು ಅತಿಯಾದ ವೇಗದಲ್ಲಿ ಚಾಲನೆ ಮಾಡಿದ ಹಿನ್ನಲೆ ಭಾರಿ ಮೊತ್ತದ ದಂಡವನ್ನು ಪೊಲೀಸರು ವಿಧಿಸಿದ್ದಾರೆಂದು ವರದಿಯಾಗಿದೆ.
ಚಿಂಚ್‌ವಾಡ್‌ನ ಮಹಾವೀರ್ ಚೌಕ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪಿಂಪ್ರಿ-ಚಿಂಚ್‌ವಾಡ್ ಸಂಚಾರ ಪೊಲೀಸರು ಈ ಐಷಾರಾಮಿ ಆಡಿ ಕಾರನ್ನು ಅಡ್ಡಹಾಕಿದ್ದಾರೆ. ವೇಗದ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಕಾರನ್ನು ಚಲಾಯಿಸಿದ ಹಿನ್ನಲೆ ಕಾರನ್ನು ತಡೆಯಲಾಗಿದೆ. ಆದರೆ ಈ ಕಾರಿನ ನಂಬರ್ ಪರೀಕ್ಷೆ ಮಾಡುತ್ತಲೇ, ಇದರ ಮೇಲೆ ಒಂದಲ್ಲ, ಎರಡಲ್ಲ ಬರೊಬ್ಬರಿ ಹತ್ತು ಸಂಚಾರ ಉಲ್ಲಂಘನೆ ಪ್ರಕರಣಗಳು ಬಾಕಿ ಇರುವುದು ತಿಳಿದು ಬಂದಿದೆ.
ಅಷ್ಟೇ, ಅಲ್ಲದೇ ನಂಬರ್ ಪ್ಲೇಟ್ ನಿಯಮವನ್ನು ಗಾಳಿಗೆ ತೂರಿರುವ ಈ ಭೂಪರು ನಂಬರ್ ಪ್ಲೇಟ್ ಮೇಲೆ 'ಗೋಲ್ಡನ್ ಗೈಸ್' ಎಂದು ಮುದ್ರಿಸಿಕೊಂಡಿದ್ದಾರೆ. ಇದರೊಂದಿಗೆ ಕಪ್ಪು ಬಣ್ಣದ ಟಿಂಟೆಡ್ ಫಿಲ್ಮ್ ಅಳವಡಿಸಿರುವುದು ಕೂಡ ಕಂಡುಬಂದಿದೆ.
ಪೊಲೀಸ್ ತಪಾಸಣೆ ವೇಳೆ ಕೇವಲ ನಂಬರ್ ಪ್ಲೇಟ್ ಮತ್ತು ಟಿಂಟೆಡ್ ಗ್ಲಾಸ್ ಮಾತ್ರವಲ್ಲದೆ, ಕಾರಿನ ಮೇಲಿದ್ದ ಇತರ ಪ್ರಕರಣಗಳು ಬೆಳಕಿಗೆ ಬಂದಿದೆ. ಕಾರಿನ ವಿಮೆ (Insurance) ಅವಧಿ ಕಳೆದ ಏಪ್ರಿಲ್ 27, 2024ರಂದೇ ಮುಗಿದುಹೋಗಿದೆ. ಅಂತೆಯೇ, ವಾಹನದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಕೂಡ ಇವರು ಹೊಂದಿಲ್ಲ ಎಂದು ತಿಳಿದಿದೆ.
ಹಾಗೆಯೇ, ಆರ್ಟಿಒ ದಾಖಲೆ ಪ್ರಕಾರ ಈ ಕಾರಿನ ಅಸಲಿ ಬಣ್ಣ ಕಪ್ಪು ಆಗಿದೆ. ಆದರೆ, ಯಾವುದೇ ಅಧಿಕೃತ ಅನುಮತಿಯಿಲ್ಲದೆ ಅದನ್ನು ಚಿನ್ನದ ಬಣ್ಣಕ್ಕೆ ಬದಲಾಯಿಸಿ ಕೊಂಡಿರುವುದು ಕಾನೂನು ಬಾಹಿರ ಕೃತ್ಯವಾಗಿದೆ. ಈ ಕಾರಿನ ಹೆಸರಿನಲ್ಲಿ ಈಗಾಗಲೇ ಒಟ್ಟು 18 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದು, ಒಟ್ಟು 33,700 ದಂಡ ಪಾವತಿಸಬೇಕಿದೆ. ಸದ್ಯದ ಉಲ್ಲಂಘನೆಗಳಿಗೆ ಸ್ಥಳದಲ್ಲೇ 6,500 ದಂಡ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಂತೆ ಓಡಾಡುವ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಧರಿಸಿ ಓಡಾಡುವ ಈ ಜೋಡಿಗೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಾರಿನ ಸ್ಟೇಟಸ್ ಏನೇ ಇರಲಿ, ಗಾಡಿಯ ಮೌಲ್ಯ ಎಷ್ಟೇ ಇರಲಿ; ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಸಂಚಾರ ಪೊಲೀಸರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ, (ಏಜೆನ್ಸೀಸ್).