ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

12 smg 1
Published on

ಶಿವಮೊಗ್ಗ: ಆಟೋದಲ್ಲೇ ಬಿಟ್ಟು ಹೋಗಿದ್ದ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಣ್ಣಾನಗರ ನಿವಾಸಿ, ಕೆಎಸ್‌ಆರ್‌ಟಿಸಿ ಮಲ್ನಾಡ್ ಆಟೋ ನಿಲ್ದಾಣದ ಚಾಲಕ ಮೊಹಮ್ಮದ್ ಗೌಸ್ ಚಿನ್ನಾಭರಣ ಹಿಂದಿರುಗಿದ ಚಾಲಕ. ಹಿರೇಕೆರೂರು ತಾಲೂಕಿನ ಚಿಕ್ಕಕಬ್ಬಾರ್ ಗ್ರಾಮದ ಶೆಹತಾಜ್‌ಬಾನು ಚಿನ್ನಾಭರಣ ಬಿಟ್ಟು ಹೋದವರು.

ಶೆಹತಾಜ್‌ಬಾನು ಅವರು ಶನಿವಾರ ಮಾಸೂರಿನಿಂದ ತಾಯಿ, ಸಹೋದರಿ ಮತ್ತು ತನ್ನ ಮಕ್ಕಳೊಂದಿಗೆ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಈ ವೇಳೆ ಅಶೋಕ ವೃತ್ತದಿಂದ ಮೊಹಮ್ಮದ್ ಗೌಸ್ ಅವರ ಆಟೋದಲ್ಲಿ ಟಿಪ್ಪುನಗರದ ತಾಯಿ ಮನೆಗೆ ತೆರಳಿದ್ದರು. ಈ ವೇಳೆ ಲಗ್ಗೇಜ್ ಹೆಚ್ಚಿದ್ದ ಕಾರಣ ಚಿನ್ನಾಭರಣವಿದ್ದ ಬ್ಯಾಗ್‌ನ್ನು 5 ವರ್ಷದ ಮಗುವಿನ ಕೈಗಿಟ್ಟಿದ್ದರು.

ಆಟೋದಲ್ಲಿ ಸ್ವಲ್ಪ ಇಕ್ಕಟ್ಟಾದ ಕಾರಣ ಮಗು ಬ್ಯಾಗ್‌ನ್ನು ಆಟೋ ಹಿಂಬದಿ ಸೀಟಿನ ಮೇಲಿಟ್ಟಿತ್ತು. ಇಳಿಯುವಾಗ ಆ ಬ್ಯಾಗ್‌ನ್ನು ತೆಗೆದುಕೊಳ್ಳುವುದನ್ನು ಮರೆತಿದ್ದರು. ಬಳಿಕ ಮನೆಯೊಳಗೆ ತೆರಳಿ ಲಗ್ಗೇಜ್ ಇಟ್ಟು ಚಿನ್ನಾಭರಣ ಪರಿಶೀಲಿಸಿದಾಗ ಬ್ಯಾಗ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಹೊರಗೆ ಬಂದು ನೋಡಿದಾಗ ಆಟೋ ಅಲ್ಲಿರಲಿಲ್ಲ. ಬಳಿಕ ಆತಂಕಗೊಂಡು ದೊಡ್ಡಪೇಟೆ ಠಾಣೆಗೆ ಪೊಲೀಸರಿಗೆ ದೂರು ನೀಡಿದ್ದರು.

ಆಟೋ ತೊಳೆಯಲು ಹೋದಾಗ ಬ್ಯಾಗ್ ಪತ್ತೆ:

ಮೊಹಮ್ಮದ್ ಗೌಸ್ ಭಾನುವಾರ ಇಡೀ ದಿನ ಆಟೋವನ್ನು ಬಾಡಿಗೆಗೆ ಓಡಿಸಿದ್ದಾರೆ. ಆದರೂ ಆಟೋದಲ್ಲಿದ್ದ ಬ್ಯಾಗ್ ಅವರು ಗಮನಕ್ಕೆ ಬಂದಿರಲಿಲ್ಲ. ಸೋಮವಾರ ಬೆಳಗ್ಗೆ ಆಟೋ ತೊಳೆಯಲು ಹೋದಾಗ ಬ್ಯಾಗ್ ಪತ್ತೆಯಾಗಿದ್ದು ತೆರೆದು ನೋಡಿದಾಗ ಚಿನ್ನದ ನಕ್ಲೇಸ್ ಮತ್ತು ಓಲೆಗಳಿದ್ದವು. ತಕ್ಷಣವೇ ಮಗನೊಂದಿಗೆ ಆಟೋದಲ್ಲಿ ಟಿಪ್ಪುನಗರಕ್ಕೆ ತೆರಳಿ ವಾರಸುದಾರರ ಹುಡುಕಾಟ ನಡೆಸಿದ್ದರು. ಆದರೆ ಕ್ರಾಸ್‌ವೊಂದರಲ್ಲಿ ಇಳಿಸಿದ್ದರಿಂದ ಶೆಹತಾಜ್‌ಬಾನು ಅವರ ಮನೆ ಗೊತ್ತಾಗದೇ ಪ್ರತಿ ಕ್ರಾಸ್‌ನಲ್ಲೂ ಸುತ್ತಾಡಿದ್ದಾರೆ. ಈ ವೇಳೆ ಮನೆ ಹೊರಗೆ ಪಾತ್ರೆ ತೊಳೆಯುತ್ತಿದ್ದ ಶೆಹತಾಜ್‌ಬಾನು ಸಹೋದರಿ ಆಟೋ ಚಾಲಕನನ್ನು ಗುರುತಿಸಿದ್ದಾಳೆ. ಅಷ್ಟೆರಲ್ಲೇ ಆಟೋ ನಿಲ್ಲಿಸಿ ಚಿನ್ನಾಭರಣವಿದ್ದ ಬ್ಯಾಗ್ ಅವರದ್ದೇ ಎಂದು ಖಚಿತಪಡಿಸಿಕೊಂಡ ಮೊಹಮ್ಮದ್ ಗೌಸ್ ಸೋಮವಾರ ಬೆಳಗ್ಗೆ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸಮ್ಮುಖದಲ್ಲಿ ಆಭರಣವಿದ್ದ ಬ್ಯಾಗ್‌ನ್ನು ವಾರಸುದಾರರಿಗೆ ಮರಳಿಸಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಗೌಸ್‌ಗೆ ಎಸ್ಪಿ ಪ್ರಶಂಸಾ ಪತ್ರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net