

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿನ ಚಿನ್ನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಾಜಿ ಅಧ್ಯಕ್ಷ ಎನ್.ವಾಸು ಅವರನ್ನು ಬಂಧಿಸಿದೆ. ಅಧ್ಯಕ್ಷರಾಗಿ ನೇಮಕರಾಗುವುದಕ್ಕೂ ಮುನ್ನ ವಾಸು ಎರಡು ಅವಧಿಗೆ ಟಿಡಿಬಿ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಜ್ಯ ಸರ್ಕಾರದಲ್ಲಿನ ಪ್ರಭಾವಿಯೊಬ್ಬರಿಗೆ ಆಪ್ತರೆನ್ನಲಾದ ವಾಸು ಅವರ ಬಂಧನ ಈ ಪ್ರಕರಣದಲ್ಲಿನ ಅತ್ಯಂತ ಪ್ರಮುಖ ಬಂಧನಗಳಲ್ಲಿ ಒಂದು ಎನ್ನಲಾಗಿದೆ. ದೇವಳದ ಗರ್ಭಗುಡಿಯ ದ್ವಾರದ ಚೌಕಟ್ಟಿನ ಚಿನ್ನ ನಾಪತ್ತೆ ಪ್ರಕರಣದಲ್ಲಿ ವಾಸು ಆರೋಪಿಯಾಗಿದ್ದು, ಈ ಪ್ರಕರಣದ ಎಸ್ಐಟಿ ತನಿಖೆ ಮೇಲೆ ಕೇರಳ ಹೈಕೋರ್ಟ್ ನಿಗಾ ಇರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ಒಬ್ಬ ನಿವೃತ್ತ ಅಧಿಕಾರಿಯನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಗರ್ಭಗುಡಿಯ ದ್ವಾರದ ಚೌಕಟ್ಟಿನಲ್ಲಿ ಚಿನ್ನ ನಾಪತ್ತೆ ಮತ್ತು ದ್ವಾರಪಾಲಕ ವಿಗ್ರಹಗಳ ಸ್ವರ್ಣಫಲಕಗಳಲ್ಲಿನ ಚಿನ್ನ ನಾಪತ್ತೆ ಎರಡೂ ಪ್ರಕರಣಗಳಲ್ಲಿ ಪೊಟ್ಟಿ ಆರೋಪಿಯಾಗಿದ್ದಾರೆ.