

ನವದೆಹಲಿ: ದಾಸ್ತಾನುದಾರರಿಂದ ನಿರಂತರ ಮಾರಾಟ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಕಡಿಮೆಯಾದ ಬೇಡಿಕೆ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 200 ರೂ. ಕಡಿಮೆಯಾಗಿದೆ. ಶೇ. 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 98,870 ರೂ. ಇದ್ದದ್ದು 98,670 ರೂ.ಗೆ ತಲುಪಿದೆ. ಶೇ. 99.5 ಶುದ್ಧತೆಯ ಚಿನ್ನ 98,400 ರೂ. ಇದ್ದದ್ದು 98,200 ರೂ. ಆಗಿದೆ. ಬೆಳ್ಳಿಯ ಬೆಲೆ ಗುರುವಾರ 500 ರೂ. ಕಡಿಮೆಯಾಗಿದೆ. ಕೆಜಿಗೆ 1,11,000 ರೂ. ಇದ್ದದ್ದು 1,10,500 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಮುಂಬೈ: ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳ ಮಾರಾಟ ಭರಾಟೆ ಮತ್ತು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಗುರುವಾರ ಇಳಿಕೆ ದಾಖಲಿಸಿದೆ. ದಿನದ ವಹಿವಾಟಿನ ಮಧ್ಯೆ 415.21 ಅಂಕ ಕುಸಿದು 82,219.27ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 375.24 ಅಂಕ ಇಳಿಕೆ ದಾಖಲಿಸಿ 82,259.24ಕ್ಕೆ ಸ್ಥಿರವಾಯಿತು. ನಿಫ್ಟಿ 100.60 ಅಂಕ ಕುಸಿದು 25,111.45ಕ್ಕೆ ಮುಕ್ತಾಯಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 1,858.15 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ ಎಂದು ವಿನಿಮಯ ಕಚೇರಿ ತಿಳಿಸಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.06ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 68.49 ಡಾಲರ್ಗೆ ತಲುಪಿತು.