ಕೃಷಿಗೆ ಸಿಗಲಿದೆ ಉದ್ಯಮದ ಸ್ವರೂಪ; ಹೊಸ ಕೃಷಿನೀತಿಗೆ ಸರ್ಕಾರ ಸಜ್ಜು

Front Agree
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವ ಜತೆಯಲ್ಲೇ ರೈತರ ಆದಾಯ ದ್ವಿಗುಣಗೊಳಿಸುವ, ಎರಡನೇ ಹಂತದ ಕೃಷಿಗೆ ಪೂರಕವಾಗಿ ನೂತನ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ. ಕೃಷಿ ಮತ್ತು ತೋಟ ಗಾರಿಕೆಗೆ ಉದ್ದಿಮೆ ಸ್ವರೂಪ ನೀಡುವ ಮೂಲಕ ಕೃಷಿ ಹಾಗೂ ಪೂರಕ ಕ್ಷೇತ್ರಗಳನ್ನು ಲಾಭದಾಯಕವಾಗಿಸುವುದು, ಉದ್ಯೋಗಾವಕಾಶ ಹೆಚ್ಚಿಸುವುದು ಸರ್ಕಾರದ ಆಶಯ. ಕೃಷಿ ಹಾಗೂ ಪೂರಕವಾದ ವಲಯ ಗಳ ನಡುವೆ ಸಮನ್ವಯವಿಲ್ಲದ್ದರಿಂದಾಗಿ ಈ ವಲಯದಲ್ಲಿನ ಸವಾಲುಗಳನ್ನು ಎದುರಿಸ ಲಾಗುತ್ತಿಲ್ಲ. ಇಂದಿನ ಬೆಳವಣಿಗೆಗಳಿಗೆ ತಕ್ಕಂತೆ ಕೃಷಿ ವಲಯವನ್ನು ಸಜ್ಜುಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ.

ಯುವಕರ ಆಕರ್ಷಣೆ: ರಾಜ್ಯದಲ್ಲಿ 120 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ 86.80 ಲಕ್ಷ ರೈತರಿದ್ದಾರೆ. ಈ ಕುಟುಂಬಗಳಿಗೆ ಕೃಷಿ ವಿವಿಗಳ ಸಂಶೋಧನೆ ಲಾಭ ದೊರಕಿಸಿಕೊಡುವುದು, ವಿದ್ಯಾವಂತ ಯುವಕರನ್ನು ಆಕರ್ಷಿಸಿ ರೈತೋದ್ಯಮಿಗಳನ್ನಾಗಿ ಮಾಡುವ ಮಹತ್ವಕಾಂಕ್ಷೆ ಹೊಸ ನೀತಿಯ ಹಿಂದಿದೆ.

ಉತ್ಪಾದನೆ ಹೆಚ್ಚಳ ಗುರಿ: ರಾಜ್ಯದಲ್ಲಿ 300 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನ ಉತ್ಪಾದನೆಯಾದರೆ, ಕೃಷಿ ಉತ್ಪನ್ನ ಪ್ರಮಾಣ 285 ಮೆಟ್ರಿಕ್ ಟನ್ ಮಾತ್ರ. ಹೀಗಾಗಿ ಕೃಷಿ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಆಶಯ. ಪಾಲಿಹೌಸ್​ಗಳಂತಹ ಸಂರಕ್ಷಿತ ಕೃಷಿ ಮಾಡಿದರೆ ಈ ಉದ್ದೇಶ ಈಡೇರುತ್ತದೆ. ರಾಜ್ಯದಲ್ಲಿರುವ 10 ಸಾವಿರ ಪಾಲಿಹೌಸ್​ಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಕೃಷಿಕರ ಬದುಕಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಸಿಎಂ ಹೊಸ ನೀತಿ ಪ್ರಕಟಿಸಿದ್ದಾರೆ. ಅದಕ್ಕೆ ತಕ್ಕಂತೆ ನೀತಿ ಸಿದ್ಧಪಡಿಸಲು ಸಮಿತಿ ರಚಿಸಲಾಗಿದೆ. ಸಾಕಷ್ಟು ಬದಲಾವಣೆ ಗಳೊಂದಿಗೆ ನೀತಿ ತರುತ್ತೇವೆ. ಅದರ ಅನುಷ್ಠಾನಕ್ಕೂ ಸರ್ಕಾರ ಬದ್ಧ. | ಬಿ.ಸಿ. ಪಾಟೀಲ್ ಕೃಷಿ ಸಚಿವ ನಷ್ಟ ತಪ್ಪಿಸುವ ತಂತ್ರ: ಎಲ್ಲ ಬೆಳೆಗಳ ಕೊಯ್ಲೋತ್ತರ ನಷ್ಟ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಸಂಸ್ಕರಣೆಯ ಅವಲಂಬನೆ ಹೆಚ್ಚಿಸಲಾಗುತ್ತದೆ. ತೋಟಗಾರಿಕೆ ಬೆಳೆಗಳಾದ ಹಣ್ಣುಗಳಲ್ಲಿ ಶೇ. 20 ರಿಂದ 30 ಕೊಯ್ಲೋತ್ತರ ನಷ್ಟವಾಗುತ್ತದೆ. ಕೃಷಿ ಉತ್ಪನ್ನ ಶೇ. 8 ರಿಂದ 10 ನಷ್ಟವಾಗುತ್ತಿದೆ. ಹೈನೋದ್ಯಮದಲ್ಲಿ ಶೇ. 1 ನಷ್ಟವಿದೆ.

ನೀತಿ ಹಿಂದಿನ ಉದ್ದೇಶ

  • ಕೃಷಿ ಸಂಬಂಧಿತ ಎಲ್ಲ ಇಲಾಖೆಗಳ ನಡುವೆ ಸಮನ್ವಯ ತರುವುದು
  • ಕೃಷಿಕರ ಆದಾಯ ಹೆಚ್ಚಿಸುವಲ್ಲಿನ ಸವಾಲುಗಳನ್ನು ನಿವಾರಿಸುವುದು
  • ಕೃಷಿ ಉತ್ಪನ್ನಗಳ ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರುಕಟ್ಟೆ ಹಾಗೂ ರಫ್ತಿಗೆ ವಿನೂತನ ಕ್ರಮ
  • ಸಂಬಂಧಿಸಿದ ಇಲಾಖೆಗಳಿಗೆ ನೀತಿ ಅನುಷ್ಠಾನಕ್ಕೆ ಸಲಹೆ ನೀಡುವುದು
  • ಅಗತ್ಯ ಅನುದಾನ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು

ಹೊಸ ನೀತಿಯಲ್ಲೇನಿದೆ?

  • ಕೆರೆಗಳ ನೀರನ್ನು ಹನಿ ನೀರಾವರಿಗೆ ಒಳಪಡಿಸುವುದು
  • ಫುಡ್​ಪಾರ್ಕ್​ ಸಂಖ್ಯೆ ಹೆಚ್ಚಿಸುವುದು, ಲಾಜಿಸ್ಟಿಕ್ ಸೌಲಭ್ಯ
  • 36 ಲಕ್ಷ ಹೆಕ್ಟೆರ್ ಇರುವ ನೀರಾವರಿ 45 ಲಕ್ಷ ಹೆಕ್ಟೆರ್​ಗೆ ಹೆಚ್ಚಳ
  • ಆಹಾರ ಸಂಸ್ಕರಣೆ, ಒಳನಾಡು ಮೀನುಗಾರಿಕೆಗೆ ಆದ್ಯತೆ
  • ಸವಳು, ಜವಳು ಭೂಮಿಯನ್ನು ಫಲವತ್ತತೆಗೆ ಒಳಪಡಿಸುವುದು
  • ಬಳಕೆಯಾಗದ ಭೂಮಿಯನ್ನು ಕೃಷಿಗೆ ಒಳಪಡಿಸುವುದು, ಒಣಭೂಮಿ ಕೃಷಿಗೆ ಆದ್ಯತೆ
  • ಬಳಕೆಯಾಗದ ಭೂಮಿಯಲ್ಲಿ ಬಿದಿರು, ಹೆಬ್ಬೇವು ಸೇರಿ ಅರಣ್ಯ ಕೃಷಿಗೆ ಅನುಕೂಲಕರ ಸಸ್ಯಗಳನ್ನು ಹೆಚ್ಚು ಬೆಳೆಯುವುದು
  • ಅರಣ್ಯ ಕೃಷಿಗೂ ಹನಿ ನೀರಾವರಿ ಬಳಕೆ, ಬಿದಿರು ಉಪ ಉತ್ಪನ್ನಗಳಾದ ಬ್ರಷ್, ವಾಜ್, ತಟ್ಟೆ, ಸ್ಟಿಕ್​ಗಳ ಉತ್ಪಾದನೆಗೆ ಒತ್ತು
  • ಮಾರುಕಟ್ಟೆ ಸೌಲಭ್ಯ ಒದಗಿಸುವುದು, ಸಮಗ್ರ ಕೃಷಿಗೆ ಒತ್ತು
  • ನೀರಿನ ಭದ್ರತೆ, ಸಾಮೂಹಿಕ ಕೃಷಿ ಪ್ರೋತ್ಸಾಹಿಸುವುದು
  • ರಾಜಸ್ಥಾನದ ನಂತರ ಹೆಚ್ಚಿನ ಒಣಭೂಮಿ ಹೊಂದಿರುವ ನಮ್ಮ ರಾಜ್ಯದಲ್ಲಿ ಪೂರಕವಾದ ಬೆಳೆಗಳಿಗೆ ಆದ್ಯತೆ
  • ನವೋದ್ಯಮಗಳ ಮೂಲಕ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದ ಸದ್ಬಳಕೆ
  • ಕೃಷಿ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಹೆಚ್ಚಿಸುವುದು, ಬಂಡವಾಳ ಆಕರ್ಷಣೆ

ಹೈಲೈಟ್ಸ್

  • 198.5 - ಲಕ್ಷ ಹೆಕ್ಟೇರ್, ರಾಜ್ಯದ ಭೂ ವಿಸ್ತೀರ್ಣ
  • 120 - ಲಕ್ಷ ಹೆಕ್ಟೇರ್, ಕೃಷಿ ಭೂಮಿ ವಿಸ್ತೀರ್ಣ
  • 20 - ಲಕ್ಷ ಹೆಕ್ಟೇರ್, ಕೃಷಿಗೆ ಬಳಕೆಯಾಗದ ಭೂಮಿ
  • 9 - ಲಕ್ಷ ಹೆಕ್ಟೇರ್, ರಾಜ್ಯದಲ್ಲಿರುವ ಗೋಮಾಳ

ಕೃಷಿಗೆ ಸಂಬಂಧಿಸಿ ಈಗಿರುವ ನೀತಿಗಳು

1995-ಮೊದಲ ಕೃಷಿ ನೀತಿ 2006- ಕೃಷಿ ನೀತಿ 2014- ಕೃಷಿ ಬಿಜಿನೆಸ್ ನೀತಿ 2015-ಸೂಕ್ಷ್ಮ ನೀರಾವರಿ ನೀತಿ 2017-ಸಾವಯವ ಕೃಷಿ ನೀತಿ 2018- ಕೃಷಿ ದೂರದೃಷ್ಟಿ 2025 2020-ಕೃಷಿ ನವೋದ್ಯಮ ನೀತಿ

ನಿರ್ಧಾರಕ್ಕೆ ಕಾರಣ

  • ಜನಸಂಖ್ಯೆ, ಕೈಗಾರಿಕೆಗಳಿಂದ ಹಿಡುವಳಿ ಗಾತ್ರ ಕಡಿಮೆಯಾಗಿದೆ
  • ಅಂತರ್ಜಲ ಮಟ್ಟ ಕುಸಿದಿದೆ. ಉತ್ಪಾದನೆ ವೆಚ್ಚ ಹೆಚ್ಚಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ
  • ಕೊಯ್ಲೋತ್ತರ ನಷ್ಟ ಹೆಚ್ಚಾಗಿ ಕೃಷಿ ಲಾಭದಾಯಕವಲ್ಲವೆಂದು ಜನ ಕೃಷಿ ತೊರೆಯುತ್ತಿದ್ದಾರೆ
  • ಈ ಸಮಸ್ಯೆಗಳಿಗೆ ತೆರೆ ಎಳೆಯುವುದು ಸರ್ಕಾರದ ಉದ್ದೇಶ

ಸಮಿತಿಯಲ್ಲಿ ಯಾರ್ಯಾರು?

ಬಜೆಟ್​ನಲ್ಲಿ ಘೋಷಿಸಿದ ರೀತಿಯಲ್ಲಿಯೇ ಹೊಸ ಕೃಷಿ ನೀತಿ ರೂಪಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕೃಷಿ, ಯೋಜನೆ, ಅರಣ್ಯ, ಪಶು ಸಂಗೋಪನೆ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಸಹಕಾರ, ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಸಂಸ್ಕರಣೆ, ನಬಾರ್ಡ್ ಅಧಿಕಾರಿಗಳು, ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳ ಕುಲಪತಿಗಳು, ತಜ್ಞರಾದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ್, ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಸಚಿವ ಡಾ.ಎ.ಬಿ. ಪಾಟೀಲ್, ಕೃಷಿ ವಿವಿ ವಿಶ್ರಾಂತ ಸಂಶೋಧನಾ ನಿರ್ದೇಶಕ ಡಾ. ಟಿ.ಕೆ. ಪ್ರಭಾಕರ ಶೆಟ್ಟಿ, ರೈತರಾದ ಕೋಲಾರದ ಕೆ.ಎಂ. ರಾಜಣ್ಣ, ಬಳ್ಳಾರಿಯ ಪ್ರಶಾಂತ್ ಸಿಂಗ್, ಬೀದರ್​ನ ಅಭಿಮನ್ಯು ನೀರ್​ಗುಡೆ ಸದಸ್ಯರಾಗಿದ್ದಾರೆ. ಕೃಷಿ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net