

ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ವಿವಿಧ ರಂಗಗಳ ಕೊರತೆಗಳನ್ನು ನಿವಾರಿಸಲು ಸರ್ಕಾರಗಳು ಕಾಲಕಾಲಕ್ಕೆ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ. ಇವು ಉತ್ತಮ ಆಶಯ, ಸುಧಾರಣೆಯ ತುಡಿತ ಹೊಂದಿರುತ್ತವೆಯಾದರೂ ಅನುಷ್ಠಾನದ ಹಂತದಲ್ಲಿ ಆಗುವ ಲೋಪಗಳಿಂದ ಮೂಲೋದ್ದೇಶ ಸಾಧಿಸುವಲ್ಲಿ ವಿಫಲವಾಗುತ್ತವೆ. ಅಲ್ಲದೆ, ಯೋಜನೆಗಳನ್ನು ರೂಪಿಸಿ, ಜಾರಿಗೆ ತರುವಾಗ ಅವು ಭವಿಷ್ಯದ ಮೇಲೆ ಬೀರುವ ಪರಿಣಾಮವನ್ನೂ ಅವಲೋಕಿಸಬೇಕಾಗುತ್ತದೆ. ಆಗಲೇ ಸರ್ಕಾರದ ಪ್ರಯತ್ನಗಳು ಫಲ ಕಾಣಲು ಸಾಧ್ಯ. ಕೇಂದ್ರ ಸರ್ಕಾರ ಯೋಜನಾ ಆಯೋಗವನ್ನೇ ರದ್ದು ಮಾಡಿ, ನೀತಿ ಆಯೋಗದ ಮುಖಾಂತರ ಅಭಿವೃದ್ಧಿಯ ವಿವಿಧ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಇದೇ ಮಾದರಿಯಲ್ಲಿ ಹೆಜ್ಜೆ ಇರಿಸಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ನಿರ್ಣಯ ತಳೆದಿದೆ. ರಾಜ್ಯ ಯೋಜನಾ ಮಂಡಳಿಯನ್ನು ‘ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ’ವೆಂದು ಬದಲಿಸಲು ತೀರ್ವನಿಸಿದ್ದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿದೆ.
ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಗ್ರಾಮ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಎಲ್ಲ ಯೋಜನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ‘ಸಿಎಂ ಡ್ಯಾಶ್ಬೋರ್ಡ್’ ಅಭಿವೃದ್ಧಿಪಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಏಕಕಾಲದಲ್ಲಿ ಪೂರ್ಣ ಆರ್ಥಿಕ ವ್ಯವಸ್ಥೆ ಮೇಲ್ವಿಚಾರಣೆ ಮಾಡಲು ಮತ್ತು ನಿರ್ಧರಿತ ಸಮಯದಲ್ಲಿ ಅಭಿವೃದ್ಧಿ ಯೋಜನೆ ಪೂರ್ಣಗೊಳಿಸಲು ಅನುವಾಗಲಿದೆ. ಬಡವರಿಗೆ ಎಲ್ಲ ಸೌಲಭ್ಯಗಳನ್ನು ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ವಿತರಿಸಲು ಮುಂದಾಗಿರುವುದರಿಂದ, ಜನಸಾಮಾನ್ಯರ ಅಲೆದಾಟ ತಪ್ಪಲಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 1-10ನೇ ತರಗತಿವರೆಗಿನ ಒಂದು ಶಾಲೆಯನ್ನು ಸ್ಮಾರ್ಟ್ ಶಾಲೆಯನ್ನಾಗಿಸುವ ಕ್ರಮ ಮಕ್ಕಳನ್ನು ಶಾಲೆಗೆ ಕರೆತರಲು ಸಹಕಾರಿ ಆಗಲಿದೆ. ಅಲ್ಲದೆ, ನೀರಾವರಿ ಆಯೋಗದ ಸ್ಥಾಪನೆಯಿಂದ ಕೃಷಿರಂಗದ, ರೈತರ ಆದಾಯ ಹೆಚ್ಚಿಸಲು ಸಾಧ್ಯವಾಗಲಿದೆ. ‘2030ರೊಳಗೆ ಎಲ್ಲ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಯೋಜನೆಗಳನ್ನು ರೂಪಿಸುವುದಷ್ಟೇ ಅಲ್ಲ, ಅವುಗಳ ಸಮರ್ಪಕ ಅನುಷ್ಠಾನ, ಫಲಾನುಭವಿಗಳನ್ನು ತಲುಪುತ್ತಿರುವ ಬಗೆ, ಜನರ ಜೀವನಮಟ್ಟದಲ್ಲಿ ಅದರಿಂದ ಆಗಿರುವ ಬದಲಾವಣೆ ಇವುಗಳನ್ನೆಲ್ಲ ಕಾಲಕಾಲಕ್ಕೆ ಅವಲೋಕಿಸಬೇಕು. ಅನುಷ್ಠಾನ ಹಂತದಲ್ಲಿನ ತೊಂದರೆ, ಲೋಪಗಳನ್ನು ನಿವಾರಿಸಬೇಕು. ಇತರ ರಾಜ್ಯಗಳ ಉತ್ತಮ ಯೋಜನೆಗಳನ್ನು ಪರಾಮಶಿಸುತ್ತಿರಬೇಕು. ಒಟ್ಟಾರೆ, ಯೋಜನಾ ಮಂಡಳಿಗೆ ಬಲ ನೀಡಿ ಅದಕ್ಕೆ ಹೊಸ ಸ್ವರೂಪ ನೀಡುತ್ತಿರುವ ಕ್ರಮ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಈ ಆಯೋಗ ಪರಿಣಾಮಕಾರಿಯಾಗಿ ಮತ್ತು ಇನ್ನಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುವಂತಾಗಲಿ.