

ಮುಂಬೈ: ಮುಸ್ಲಿಮರ ಬಕ್ರೀದ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿವೆ. ಕೋವಿಡ್-19 ಪಿಡುಗು ಇಲ್ಲದೇ ಹೋಗಿದ್ದರೆ ಈ ವೇಳೆಗಾಗಲೆ ಮುಸ್ಲಿಮರು ತಮಗೆ ಬೇಕಾದ ಕುರಿಗಳನ್ನು ಖರೀದಿಸಿ, ಅವುಗಳನ್ನು ಇನ್ನಷ್ಟು ಮೇಯಿಸಿ ಕೊಬ್ಬುವಂತೆ ಮಾಡಿರುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಪಿಡುಗು ಅವರ ಇಂಥ ಬಯಕೆಗಳಿಗೆ ತಣ್ಣೀರೆರೆಚಿದೆ.
ಹಾಗೆಂದು ಮುಸ್ಲಿಮರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಮಾರುಕಟ್ಟೆಗೆ ಹೋಗಿ, ಹುಡುಕಿ, ತಡಕಿ ಕುರಿಗಳನ್ನು ತರಲು ಸಾಧ್ಯವಾಗದಿದ್ದರೆ ಏನಂತೆ. ಆನ್ಲೈನ್ನಲ್ಲಿ ಆ ಸೌಲಭ್ಯ ಇದೆಯಲ್ಲ? ಅದನ್ನು ಬಳಸಿಕೊಂಡು ತಮ್ಮಿಷ್ಟದ ಕುರಿಯನ್ನು ಆಯ್ಕೆ ಮಾಡಿಕೊಂಡು ಹಣ ಸಂದಾಯ ಮಾಡಿದರೆ ಮನೆಬಾಗಿಲಿಗೆ ಕುರಿಯನ್ನು ಡೆಲಿವರಿ ಮಾಡಲಾಗುತ್ತದೆ.
ಇಂಥ ಒಂದು ಸೌಲಭ್ಯ ಮುಂಬೈನಲ್ಲಿ ಆರಂಭವಾಗಿದೆ. ಜೋಗೇಶ್ವರಿಯಲ್ಲಿರುವ ಹಾಜಿ ಗೋಟ್ ಫಾರ್ಮ್ ಇಂಥ ಸೌಲಭ್ಯ ಆರಂಭಿಸಿದೆ. ತನ್ನ ವೆಬ್ಸೈಟ್ನಲ್ಲಿ ತನ್ನಲ್ಲಿ ಲಭ್ಯವಿರುವ ಎಲ್ಲ ಮಾದರಿಯ ಕುರಿಗಳ ಚಿತ್ರವನ್ನು ಅಲ್ಲಿ ಪ್ರದರ್ಶಿಸಿದೆ. ಅದನ್ನು ನೋಡಿ, ಯಾವ ಕುರಿ ಇಷ್ಟವಾಗುತ್ತದೋ ಆ ಕುರಿಯನ್ನು ಗುರುತಿಸಿ, ಅದರ ಬೆಲೆಯನ್ನು ಪಾವತಿಸಿದರೆ ಸಾಕು. ಮರುದಿನ ಬೆಳಗ್ಗೆಯೊಳಗೆ ಕುರಿ ಗ್ರಾಹಕರರ ಮನೆಯಲ್ಲಿ ಇರುತ್ತದೆ.
ಕರೊನಾವೈರಾಣು ಸೋಂಕಿನ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವುದನ್ನು ತಪ್ಪಿಸಬೇಕಾಗಿದೆ. ಆದ್ದರಿಂದ, ನಾವು ಈ ಆಲೋಚನೆ ಮಾಡಿದೆವು. ಆನ್ಲೈನ್ನಲ್ಲೇ ಕುರಿಗಳನ್ನು ನೋಡಿ ಆರ್ಡರ್ ಕೊಟ್ಟರೆ ಮರುದಿನದೊಳಗೆ ಕುರಿಯನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ ಎಂದು ಹಾಜಿ ಗೋಟ್ ಫಾರ್ಮ್ನ ವಸೀಂ ಖಾನ್ ಹೇಳಿದ್ದಾರೆ.