ಗಂಗನದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

05 HANUR 1
ಗಂಗನದೊಡ್ಡಿಯ ಭೈರಪ್ಪ ಅವರ ಜಮೀನಿನಲ್ಲಿ ಅಳವಡಿಸಿರುವ ಬೋನಿನಲ್ಲಿ ಮೇಕೆ ಇರಿಸಿರುವುದು.
Published on

ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿರುವ ಬೆನ್ನಲ್ಲೇ ಭಾನುವಾರ ರಾತ್ರಿ ಸಮೀಪದ ಬಸಪ್ಪನ ದೊಡ್ಡಿ ಗ್ರಾಮದಲ್ಲಿ ಮತ್ತೊಂದು ಮೇಕೆ ಬಲಿಯಾಗಿದೆ.

ಅಜ್ಜೀಪುರ ಭಾಗದ ಬಸಪ್ಪನದೊಡ್ಡಿ, ಅಂಬಿಕಾಪುರ, ಕಾಂಚಳ್ಳಿ ಜಿ.ಆರ್.ನಗರ ಹಾಗೂ ಗಂಗನದೊಡ್ಡಿ ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಆಗಾಗ್ಗೆ ದಾಳಿ ನಡೆಸಿ ಈವರೆಗೂ ಸುಮಾರು 50ಕ್ಕೂ ಹೆಚ್ಚು ಮೇಕೆಗಳನ್ನು ಬಲಿ ಪಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಅಲ್ಲಲ್ಲಿ ಬೋನು ಅಳವಡಿಸಲಾಗಿದೆ. ಆದರೆ ಚಾಲಾಕಿ ಚಿರತೆ ಬೋನಿಗೆ ಬೀಳುತ್ತಿಲ್ಲ. ಇದೀಗ ಕಳೆದ 3 ದಿನದಿಂದೀಚೆಗೆ ತನ್ನ ಚಾಳಿಯನ್ನು ಮುಂದುವರಿಸಿರುವ ಚಿರತೆ ಗಂಗನದೊಡ್ಡಿ ಗ್ರಾಮದಲ್ಲಿ 2 ಮೇಕೆಯನ್ನು ಬಲಿ ಪಡೆದಿತ್ತು. ಭಾನುವಾರ ತಡರಾತ್ರಿ ಬಸಪ್ಪನ ದೊಡ್ಡಿ ಗ್ರಾಮದ ಬಾಬು ಎಂಬುವರ ತೋಟದ ಮನೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದ ಚಿರತೆ ಕಟ್ಟಿಹಾಕಲಾಗಿದ್ದ ಮೇಕೆಯನ್ನು ಬಲಿ ಪಡೆದಿದೆ.

ರೈತರಿಂದಲೇ ಮೇಕೆ ಇರಿಸುವಿಕೆ: ಕಳೆದ ನಾಲ್ಕೈದು ತಿಂಗಳಿನಿಂದಲೂ ಚಿರತೆ ದಾಳಿಗೆ ಮೇಕೆಗಳು ಬಲಿಯಾಗುತ್ತಿದ್ದು, ಈ ಭಾಗದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಲ್ಲಲ್ಲಿ ಬೋನು ಇರಿಸಿದೆ. ಆದರೆ ಸೆರೆ ಹಿಡಿಯುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಚಿರತೆ ಹಾವಳಿಯಿಂದ ರೈತರು ರೋಸಿ ಹೋಗಿದ್ದಾರೆ. ಇದರಿಂದ ಬೇಸತ್ತು ಚಿರತೆಯನ್ನು ಸೆರೆ ಹಿಡಿಯಲು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಅವರ ನೇತೃತ್ವದಲ್ಲಿ ರೈತರೇ ಹಣವನ್ನು ಸಂಗ್ರಹಿಸಿ 8 ಸಾವಿರ ರೂ. ನೀಡಿ ಮೇಕೆಯನ್ನು ಖರೀದಿಸಿದ್ದು, ಗಂಗನದೊಡ್ಡಿ ಗ್ರಾಮದ ಭೈರಪ್ಪ ಅವರ ಜಮೀನಿನಲ್ಲಿ ಅಳವಡಿಸಿರುವ ತುಮಕೂರು ಕೇಜ್ ಬೋನಿನಲ್ಲಿ ಇರಿಸಿದ್ದಾರೆ. ಚಿರತೆ ಸೆರೆಯ ಮೇಲೆ ನಿಗಾ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net