ಕಡಲತೀರಕ್ಕೆ ತೇಲಿಬಂದ ಮತ್ಸ್ಯಕನ್ಯೆ ಆಕಾರದ ನಿಗೂಢ ಜೀವಿ! ವಿಜ್ಞಾನಿಗಳ ನಡುವೆ ಹೆಚ್ಚಿದ ಕುತೂಹಲ

Mermaid
Published on

ಪೋರ್ಟ್ ಮೊರೆಸ್ಬಿ: ಪಾಪುವಾ ನ್ಯೂಗಿನಿಯಾದ ಕಡಲತೀರದಲ್ಲಿ ಮತ್ಸ್ಯಕನ್ಯೆ ರೀತಿಯ ವಿಚಿತ್ರ ಜೀವಿಯೊಂದು ತೇಲಿಬಂದಿದ್ದು, ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ. ಈ ವಿದ್ಯಾಮಾನ ಇದೀಗ ಸಾಗರಳ ಆಳದ ನಿಗೂಢತೆಯನ್ನು ಭೇದಿಸುವ ಮಾನವನ ಆಸಕ್ತಿಗೆ ಮತ್ತಷ್ಟು ಕಿಡಿ ಹೊತ್ತಿಸಿದೆ.

ಮತ್ಸ್ಯಕನ್ಯೆಯ ಆಕಾರದಲ್ಲಿರುವ ಪ್ರೇತ ಬಿಳಿ ಬಣ್ಣದ ವಿಚಿತ್ರ ಜೀವಿಯ ಫೋಟೋಗಳನ್ನು "ನ್ಯೂ ಐರ್ಲೆಂಡರ್ಸ್​ ಓನ್ಲಿ" ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿವೆ. ಮತ್ಸ್ಯಕನ್ಯೆಯನ್ನು ಹೋಲುವ ವಿಚಿತ್ರವಾದ, ಮಸುಕಾದ ಮತ್ತು ಕೊಳೆತ ದ್ರವ್ಯರಾಶಿ ಸೆಪ್ಟೆಂಬರ್ 20ರಂದು ಪಾಪುವ ನ್ಯೂಗಿನಿಯಾದ ಬಿಸ್ಮಾರ್ಕ್ ಸಮುದ್ರದ ಸಿಂಬೆರಿ ದ್ವೀಪದಲ್ಲಿ ಜನರ ಕಣ್ಣಿಗೆ ಬಿದ್ದಿತು. ಈ ವಿಚಿತ್ರ ಜೀವಿಯ ನಿಜ ಸ್ವರೂಪದ ಬಗ್ಗೆ ತಜ್ಞರಿಗೆ ಇನ್ನೂ ಖಚಿತವಾಗಿಲ್ಲ. ಆದರೆ, ಇದು ನಿಗೂಢ ಜೀವಿಗಿಂತ ಸಮುದ್ರದ ಜೀವಿಯಾಗಿರಬಹುದು ಎಂದು ನಂಬಲಾಗಿದೆ.

ಲೈವ್ ಸೈನ್ಸ್ ಪ್ರಕಾರ, ಇದನ್ನು ಗ್ಲೋಬ್​ಸ್ಟರ್​ ಎಂದು ಕರೆಯಲಾಗುತ್ತದೆ. ಗ್ಲೋಬ್​ಸ್ಟರ್​ ಎಂಬುದು ಕಡಲ ತೀರಕ್ಕೆ ತೊಳೆಯುವ ಗುರುತಿಸಲಾಗದ ಸಾವಯವ ದ್ರವ್ಯರಾಶಿಯಾಗಿದೆ. ಈ ನಿಗೂಢ ಗ್ಲೋಬ್​ಸ್ಟರ್​ಗಳ ಮೂಲವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಏಕೆಂದರೆ ಶವದ ಹೆಚ್ಚಿನ ಭಾಗವು ಕೊಳೆತಿರುತ್ತದೆ ಮತ್ತು ದೇಹದ ಭಾಗಗಳು ಸಮುದ್ರದಲ್ಲಿ ಕಳೆದು ಹೋಗಿರುತ್ತವೆ. ಸ್ಥಳೀಯರು ಅದನ್ನು ಹೂಳುವ ಮೊದಲು ಅದನ್ನು ಸರಿಯಾಗಿ ಅಳತೆ ಮಾಡದ ಕಾರಣ ಶವದ ಗಾತ್ರ ಮತ್ತು ತೂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೆ, ಯಾರೊಬ್ಬರು ಕೂಡ ಡಿಎನ್ಎ ಮಾದರಿಗಳನ್ನು ಸಂಗ್ರಹಿಸದೇ ಇರುವುದರಿಂದ ನಿಗೂಢ ಜೀವಿಯ ಗುರುತಿಸುವಿಕೆಯು ಅಸಾಧ್ಯವಾಗಿದೆ.

ಇದು ಸಮುದ್ರದ ಸಸ್ತನಿಯಂತೆ ಕಾಣುತ್ತದೆ ಎಂದು ಆಸ್ಟ್ರೇಲಿಯಾದ ಜೇಮ್ಸ್ ಕುಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಹೆಲೆನ್ ಮಾರ್ಷ್ ಲೈವ್ ಸೈನ್ಸ್‌ಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net