

ಶಿವಮೊಗ್ಗ: ಜಾಗತೀಕರಣ ನಮ್ಮ ಸಂಸ್ಕೃತಿಯ ತಾಯಿಬೇರುಗಳಾದ ಕುಲಕಸುಬುಗಳನ್ನು ಕಸಿದುಕೊಳ್ಳುತ್ತಿದೆ. ಆ ಕಸುಬುಗಳ ಮಹತ್ವವನ್ನು ಸಮ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಕೃಷಿನಗರದ ಶ್ರೀ ಗಾಯತ್ರಿ ವಿಶ್ವಕರ್ಮ ದೇವಾಲಯ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಎ.ಕಮಲಮ್ಮ, ಎ.ವಿ.ಬಸಪ್ಪಾಚಾರ್ ಅವರ ದತ್ತಿ ಆಶಯದಂತೆ ವಿಶ್ವಕರ್ಮರ ಪಂಚಕಸುಬುಗಳು ಮತ್ತು ಕೊಡುಗೆಗಳು ಕುರಿತ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದತ್ತಿ ವಿಚಾರವಾಗಿ ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಮಾತನಾಡಿ, ಅನೇಕ ಸಂಪ್ರದಾಯಗಳಲ್ಲಿ ವಿಶ್ವಕರ್ಮ ಹೆಸರಿದೆ. ಅಲ್ಲಿ ಕೌಶಲ ಮತ್ತು ಕಸುಬನ್ನು ವೈಜ್ಞಾನಿಕವಾಗಿ ವ್ಯಾಖ್ಯಾನ ಮಾಡುವ ಅಗತ್ಯವಿದೆ. ಜಗತ್ತಿಗೆ ಚಲನೆಯ ಪರಿವರ್ತನೆ ನೀಡಿದವರು ವಿಶ್ವಕರ್ಮ ಎಂದರು.
ಇದೇ ವೇಳೆ ಆಯೆಶಾಬೀ ಯಾನೆ ಖಾಸಂಬಿ ಕೋಂ. ಸಯದ್ ರಸೂಲ್ ಸಾಬ್ ಅಬ್ಬಲಗೆರೆ ಸ್ಮರಣೆ ದತ್ತಿ ಅಂಗವಾಗಿ ದಾನಿಗಳಾದ ಅಬ್ಬಾಸ್ ಅಬ್ಬಲಗೆರೆ ಅವರ ಆಶಯದಂತೆ ಸಂತ ಶಿಶುನಾಳ ಶರೀಫರ ಗೀತೆಗಳನ್ನು ಗಾಯಕರಾದ ಲಲಿತಮ್ಮ ವಿಠ್ಠಲದಾಸ್ ಹಾಡಿದರು.
ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷೆ ಅನ್ನಪೂರ್ಣಮ್ಮ ಕಾಳಾಚಾರ್, ದತ್ತಿ ದಾನಿಗಳಾದ ಡಾ. ಎಸ್.ಭಾಗ್ಯಲಕ್ಷ್ಮೀ, ಡಾ. ಎ.ಬಿ.ಕೃಷ್ಣಮೂರ್ತಿ ಆಚಾರ್, ಪವನ್‌ಕುಮಾರ್, ಷಣ್ಮುಖಾಚಾರ್, ಪ್ರಕಾಶ್ ಆಚಾರ್, ಡಾ. ಕೃಷ್ಣಮೂರ್ತಿ ಆಚಾರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ.ಗಣೇಶ, ಎಂ.ಎಂ.ಸ್ವಾಮಿ, ಸಾವಿತ್ರಮ್ಮ, ಸುಜಾತಾ ಪ್ರಕಾಶ್ ಇತರರಿದ್ದರು.