ಗೋವಾದಲ್ಲಿ ಜೂನ್-24 ರಿಂದ 30 ವರೆಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ.

Mohan Gowda
Published on

ಬೆಂಗಳೂರು:ಹಿಂದೂ ಸಮಾಜದ ರಕ್ಷಣೆಯ ದೃಷ್ಠಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಜೂನ್-24 ರಿಂದ 30, 2024 ವರೆಗೆ, ಗೋವಾ ಫೋಂಡಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.

ಅಧಿವೇಶನದಲ್ಲಿ ಹಿಂದೂ ರಾಷ್ಟ್ರಕ್ಕೆ ಸಂಬಂಧಿತ ವಿವಿಧ ವಿಷಯಗಳ ಬಗ್ಗೆ ವಿಶೇಷ ಗಣ್ಯರು ಸಂವಾದ ನಡೆಸಲಿದ್ದಾರೆ. ಸನಾತನ ಧರ್ಮದ ವೈಚಾರಿಕ ಸುರಕ್ಷೆ, ಧರ್ಮ ಮತ್ತು ರಾಷ್ಟ್ರ ವಿರೋಧಿ ನೆರೆಟಿವ್‌ಗಳಿಗೆ ಪ್ರತ್ಯುತ್ತರ, ಹಿಂದೂ ಸಮಾಜದ ರಕ್ಷಣೆಯ ಉಪಾಯ, ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನಿಕ ಪ್ರಯತ್ನ, ಮಂದಿರ ಸಂಸ್ಕೃತಿಯ ರಕ್ಷಣೆಯ ಉಪಾಯ, ವೈಶ್ವಿಕ ಮಟ್ಟದಲ್ಲಿ ಹಿಂದುತ್ವದ ರಕ್ಷಣೆ ಹೀಗೆ ವಿವಿಧ ವಿಷಯಗಳ ಜೊತೆಗೆ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯವಿರುವ ವಿಷಯಗಳ ಬಗ್ಗೆ ಈ ಮಹೋತ್ಸವದಲ್ಲಿ ವಿಚಾರಮಂಥನ ನಡೆಸಲಾಗುವುದು ಎಂದು ಹಿಂದೂ ಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ದೇಶದ 26 ರಾಜ್ಯಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸಂಘಟನೆಗಳು 2000 ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಇಂದೋರಿನ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜ, ಇಂಟರ್ನ್ಯಾಷನಲ್ ವೇದಾಂತ ಸೊಸೈಟಿಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜ್, ಛತ್ತೀಸ್ಗಡದ ಶ್ರೀ ರಾಮಬಾಲಕದಾಸ ಮಹಾತ್ಯಾಗಿ ಮಹಾರಾಜ, ಛತ್ತಿಸ್ಗಢದ ಶದಾಣಿ ದರ್ಬಾರಿನ ಪರಮಪೂಜ್ಯ ಡಾ. ಯುಧಿಷ್ಠಿರಲಾಲ್ ಮಹಾರಾಜ ಮುಂತಾದ ಸಂತರು ಹಲವಾರು ಹಿಂದೂ ಸಮಾಜದ ಮುಖಂಡರು, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ನಂತರ ದೇಶದ ಪರಿಸ್ಥಿತಿ ನೋಡಿದರೆ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸಲು ಹಿಂದೂಗಳೇ ಈಕೋಸಿಸ್ಟಮ್ ನಿರ್ಮಿಸಿ ಆಯೋಜನಾಬದ್ಧ ಪದ್ಧತಿಯಿಂದ ಕಾರ್ಯ ನಿರ್ವಹಿಸುವ ಅವಶ್ಯಕತೆ ನಿರ್ಮಾಣವಾಗಿದೆ. ಸ್ವಾತಂತ್ರ್ಯದ ನಂತರ 1950 ರಿಂದ 2015 ಈ 65 ವರ್ಷದ ಸಮಯದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು ಶೇಕಡಾ 8 ರಷ್ಟು ಕಡಿಮೆಯಾಗಿ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇಕಡಾ 43.15 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅಕ್ರಮ ಬಾಂಗ್ಲಾದೇಶಿಯರ ಜೊತೆಗೆ ರೋಹಿಂಗ್ಯಾ ನುಸುಳಕೋರರ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಅಪಾಯಕಾರಿ ಹಂತಕ್ಕೆ ತಲುಪಲಿದೆ. ಈಗಾಗಿ ಕೂಡಲೇ ಹಿಂದೂ ಸಮಾಜ ಹೆಚ್ಚೆತ್ತುಕೊಳ್ಳಬೇಕು ಎಂದರು.

ಮಾತಾ ವೈಷ್ಣೋದೇವಿ ದರ್ಶನಕ್ಕೆ ಹೋಗುವ ಭಕ್ತರ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅಂದರೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಈಗ ನಿಧಾನವಾಗಿ ಹಿಂದೂ ಬಹುಸಂಖ್ಯಾತರಿರುವ ಜಮ್ಮುವಿನ ಕಡೆಗೆ ಮುನ್ನುಗುತ್ತಿದೆ. ಪಂಜಾಬನಲ್ಲಿ ಖಲಿಸ್ತಾನಿವಾದಿ ಪ್ರತಿಭಟನೆ ಜೊತೆಗೆ ರಾಷ್ಟ್ರ ವಿರೋಧಿ ಮತ್ತು ವಿದೇಶಿ ಶಕ್ತಿಗಳು ಭಾರತವನ್ನು ಅಸ್ಥಿರಗೊಳಿಸಲು ಶಕ್ತಿಯುತವಾಗಿ ಸಕ್ರಿಯವಾಗಿವೆ ಎಂದು ಹೇಳಿದ ಅವರು ಭಾರತದ ಜೊತೆಗೆ ವಿಶ್ವದಾದ್ಯಂತ ಹಿಂದುಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ಇಂತಹ ಸಮಯದಲ್ಲಿ ಹಿಂದೂಗಳಿಗೆ ಜಾತಿ ಜಗಳಗಳಲ್ಲಿ ತೊಡಗಿಸಿ ಅವರಲ್ಲಿ ಬಿರುಕು ಮೂಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕ ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ನ್ಯಾಯವಾದಿ ಪ್ರಸನ್ನ ಡಿ.ಪಿ, ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ್ ಕೆಂಚಾಂಬ , ಆನೇಕಲ್‌ನ ನಾಗರಘಟ್ಟ ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ . ಸೋಮೇಶ ರೆಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net