ಇಂದು ಜಯಂತಿ: ಜಾಗತಿಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ

ವಿಜಯವಾಣಿ (4)
Published on

ವಿಶ್ವಗುರು ಬಸವಣ್ಣ ಅವರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕು. ಅಸಮಾನತೆ, ಭೇದಭಾವ, ಅಸ್ಪೃಶ್ಯತೆಯನ್ನು ವಿರೋಧಿಸಿ ಸಾಮಾಜಿಕ ಸುಧಾರಣೆಗಳನ್ನು ಸಾಕಾರಗೊಳಿಸಿದ ಕ್ರಾಂತಿಪುರುಷ ಬಸವಣ್ಣ. ಅವರ ಜಯಂತಿಯ ಅಂಗವಾಗಿ ನಾಡಿನ ಮೂವರು ಗಣ್ಯರು ಬಸವತತ್ತ ್ವ ಪ್ರಭೆಯನ್ನು ಇಲ್ಲಿ ವಿವರಿಸಿದ್ದಾರೆ.

ಯುಗದ ಉತ್ಸಾಹ

| ಬಿ.ವೈ. ವಿಜಯೇಂದ್ರ, (ಲೇಖಕರು ಬಿಜೆಪಿ ರಾಜ್ಯಾಧ್ಯಕ್ಷರು, ಶಾಸಕರು)

ವಚನ ಚಳವಳಿಯ ಅನುಭಾವಿ ಸಂತ ಅಲ್ಲಮ ಪ್ರಭುದೇವರು ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಕರೆದಿದ್ದಾರೆ. ಈ ಪದ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಹೋನ್ನತ ರೂಪಕವಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಕೈಗೊಂಡ ಕಾರ್ಯವಿಧಾನ ಇಂದಿಗೂ ನಿಬ್ಬೆರಗುಗೊಳಿಸುತ್ತದೆ. ಹರಿಹರ ಕವಿ ಬಸವಣ್ಣನವರನ್ನು ಕುರಿತು ರಚಿಸಿದ ‘ಬಸವರಾಜ ದೇವರ ರಗಳೆ’ ಎಂಬ ಅಪೂರ್ವ ಕಾವ್ಯದಲ್ಲಿ ಬಸವಣ್ಣನನ್ನು ರಾಜ ಮತ್ತು ದೇವರು ಎಂದು ಸಂಬೋಧಿಸಿದ್ದು ಧ್ವನಿಪೂರ್ಣ ಮತ್ತು ಅರ್ಥಗರ್ಭಿತ. ಈ ಪದ ಬಸವಣ್ಣನವರ ಅಶಯ ಮತ್ತು ಉದ್ದೇಶವೆರಡನ್ನೂ ಅಭಿವ್ಯಕ್ತಿಸುತ್ತದೆ. ಅದು ಬಸವಣ್ಣನವರ ಸಾಮಾಜಿಕ ಕಳಕಳಿ ಹಾಗೂ ಅಧ್ಯಾತ್ಮ ಚೇತನವನ್ನು ಧ್ವನಿಸುತ್ತದೆ. ಈ ತತ್ವವೇ ವಚನ ಚಳವಳಿಯ ಆಶಯವೂ ಆಗಿದೆ. ವಚನ ಚಳವಳಿಗೆ ಸಾಮಾಜಿಕ ಪಲ್ಲಟ ಎಷ್ಟು ಮುಖ್ಯವೋ, ಅಧ್ಯಾತ್ಮದ ಸಂಗತಿಯೂ ಅಷ್ಟೆ ಪ್ರಧಾನವಾಗಿತ್ತು.

ವಚನಗಳ ರಚನೆ ಕೇವಲ ಕಾವ್ಯಾಭಿವ್ಯಕ್ತಿಯಲ್ಲ. ವಚನಕಾರರಿಗೆ ಸಾಮಾಜಿಕ, ಆಧ್ಯಾತ್ಮಿಕ ಸಂಗತಿ ಮತ್ತು ಅದು ಬದಲಾಗಬೇಕಾದ ಅನಿವಾರ್ಯತೆ ಮುಖ್ಯವಾಗಿತ್ತು. ಆದುದರಿಂದಲೇ ವಚನ ರಚನೆ ವಚನಕಾರರಿಗೆ ಆನುಷಂಗಿಕ ಅಭಿವ್ಯಕ್ತಿಯಾಗಿತ್ತು. ವಚನವೆಂದರೆ ಮಾತು ಎಂಬ ನಾಮಪದದ ಅರ್ಥಮಾತ್ರವಿರದೆ; ಭಾಷೆ, ಆಣೆ, ಪ್ರಮಾಣ ಎನ್ನುವ ಕ್ರಿಯಾಪದದ ಅರ್ಥವೂ ಇದೆ. ಆದುದರಿಂದಲೇ ವಚನಕಾರರಿಗೆ ಮಾತೆಂಬುದು ಜೋತಿರ್ಲಿಂಗ, ನುಡಿ ಮುತ್ತಿನ ಹಾರ, ಅದೊಂದ ಭಕ್ತಿಯ ಶುಭಾಶಯವಾಗಿತ್ತು. ಬಸವಣ್ಣನವರು ಭಕ್ತರೆಲ್ಲ ಒಂದೇ ಅವರಲ್ಲಿ ತಾರತಮ್ಯವಿಲ್ಲ, ಎಲ್ಲರೂ ಸಮಾನರು ಎಂದು ಸಾರಿದರು. ನಾವು ಮಾಡುವ ಉದ್ಯೋಗದಿಂದ ಜಾತಿಗಳು ಸೃಷ್ಟಿಯಾದವೇ ಹೊರತು ಹುಟ್ಟಿನಿಂದ ಜಾತಿಯನ್ನು ಅರಸಬಾರದು. ಕಾಸಿ ಕಮ್ಮಾರನಾದ, ಬಿಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರವನಾದ, ಕರ್ಣನಲ್ಲಿ ಜನಿಸಿದವರುಂಟೆ ಜಗದೊಳಗೆ?

ಇದು ಕಾರಣ ಕೂಡಲಸಂಗಮದೆವಾ ಲಿಂಗಸ್ಥಲವನರಿದವನೇ ಕುಲಜನು! ಎಂಬುದಾಗಿ ನಿಜವಾದ ಕುಲಜನೆಂದರೆ ಅವರು ಭಕ್ತರಾಗಿರಬೇಕು, ಲಿಂಗಧಾರಿಯಾಗಿರಬೇಕು ಎಂದರು. ವಚನ ಆಂದೋಲನವು ಧಾರ್ವಿುಕ ಮೌಲ್ಯಗಳ ಪುನರ್ ವ್ಯಾಖ್ಯಾನ ನೀಡಿ ಸಾಮಾಜಿಕ ದೃಷ್ಟಿಕೋನವನ್ನು ಬದಲಾಯಿಸಿತು. ‘ಕಾಯಕವೇ ಕೈಲಾಸ’ ಎಂಬ ಮಾತು ಪ್ರತಿ ಕಾಯಕಕ್ಕೂ ತನ್ನದೇ ಆದ ಮಹತ್ವವಿದೆ, ಘನತೆ ಇದೆ ಎಂದು ಸಾರಿತು. ದೇವರನ್ನು ಶುದ್ಧ ಮನಸ್ಸಿನಿಂದ ಪ್ರೀತಿಸುವುದು ಹಾಗೂ ದುಡಿಯುವುದು ಧರ್ಮವೆಂದು ಸಾರಿದವರು ಬಸವಣ್ಣ. ದೇವರ ಹೆಸರಿನಲ್ಲಿ ಪ್ರಾಣಿಬಲಿ, ಮೌಢ್ಯಗಳ ಆಚರಣೆಗಳನ್ನು ಖಂಡಿಸಿ ಅರಿವೇ ಗುರುವೆಂದು ಸಾರಿದರು. ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ. ದೇವರ ಹೆಸರಲ್ಲಿ ನಡೆಯುತ್ತಿದ್ದ ಕಂದಾಚಾರವನ್ನು ತಿರಸ್ಕರಿಸಿದ ಬಸವಣ್ಣನವರು ದೇವರನ್ನು ಒಪ್ಪಿದ್ದರು. ನೈತಿಕತೆಯ ಆಧಾರಿತ ಧರ್ಮಕ್ಕೆ ಅವರು ಬುನಾದಿ ಹಾಕಿದರು. ಆದುದರಿಂದಲೇ ಅವರು ಎಲ್ಲ ಕಾಲಕ್ಕೂ ಯುಗದ ಉತ್ಸಾಹವಾಗಿದ್ದಾರೆ.

ಮಾನವ ಸಂವಿಧಾನದ ಶಿಲ್ಪಿ

| ಡಾ.ಸಿ. ಸೋಮಶೇಖರ, (ಲೇಖಕರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ನಿವೃತ್ತ ಐಎಎಸ್ ಅಧಿಕಾರಿ)

ವಿಶ್ವದಲ್ಲಿ ಕಾಲಕಾಲಕ್ಕೆ ಅನೇಕ ರೀತಿಯ ಕ್ರಾಂತಿಗಳಾಗಿವೆ. ಆ ಯಾವ ಕ್ರಾಂತಿಗಳು ಶರಣರ ಸಮಗ್ರ ಕ್ರಾಂತಿಯನ್ನು ಹೋಲುವುದಿಲ್ಲ. ಮಾನವ ಸಮುದಾಯದ ಎಲ್ಲ ಕ್ಷೇತ್ರಗಳ ಸದಾಶಯಗಳಿಗೆ ಸ್ಪಂದಿಸುವಂತಹ ಕ್ರಾಂತಿಗೆ ನಾಂದಿ ಹಾಡಿದವರು ಬಸವಾದಿ ಶರಣರು. ಧಾರ್ವಿುಕ, ಆರ್ಥಿಕ, ಸಾಹಿತ್ಯಿಕ, ನೈತಿಕ ಹಾಗೂ ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರ ಕ್ರಾಂತಿಕಾರಕ ವಿಚಾರಧಾರೆ ಪ್ರಖರವಾಗಿ ಮಾನವೀಯ ನೆಲೆಯಲ್ಲಿ ಹರಿದುಬಂದದ್ದು ಒಂದು ವಿಸ್ಮಯ. ಇದಕ್ಕೆ ಮೂಲ ಪ್ರೇರಣೆಯಾದದ್ದು ಬಸವಾದಿ ಶರಣರ ದಾರ್ಶನಿಕ ಚಿಂತನೆಗಳು ಹಾಗೂ ಪ್ರತಿಪಾದಿಸಿದ ಮಾನವೀಯ ಜೀವನ ಮೌಲ್ಯಗಳು.

ಬಸವಣ್ಣನವರು ಧರ್ಮಕ್ಕೆ ವೈಚಾರಿಕ ವಿವೇಕದ ಸ್ಪರ್ಶ ನೀಡಿದರು. ಇಡೀ ಜಗತ್ತಿಗೆ ಅನ್ವಯವಾಗುವಂತೆ ಜೀವನ ಸಂವಿಧಾನವನ್ನು ನೀಡಿದ ಮಾನವ ಸಂವಿಧಾನದ ಶಿಲ್ಪಿ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,/ ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,/ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ./ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗಶುದ್ಧಿ/ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. ಈ ವಚನ ಬಸವಾದಿ ಶರಣರು ನಡೆಸಿದ ಸಮಗ್ರ ಕ್ರಾಂತಿಗೆ ಮೂಲ ಪ್ರೇರಣೆ ಎನ್ನಬಹುದು.

ಜಾತ್ಯತೀತ ಸಮಾಜದ ಕಲ್ಪನೆ: ಬಸವಣ್ಣನವರ ದೃಷ್ಟಿಯಲ್ಲಿ ಜಾತಿಗೆ ಸ್ಥಾನವೇ ಇಲ್ಲ. ಅವರು ಕಂಡದ್ದು ಜಾತ್ಯತೀತವಾದ ವಿಶ್ವಭ್ರಾತೃತ್ವದ ಸಮಾಜ. ‘ಇವನಾರವ, ಇವನಾರವ ಎಂದೆನಿಸದಿರಯ್ಯಾ, ಇವನಮ್ಮವ ಇವನಮ್ಮವ ಎಂದೆನಿಸಯ್ಯಾ’ ಎಂಬ ವಚನ ವಿಶ್ವಕ್ಕೆ ನೀಡಿದ ಒಂದು ಶ್ರೇಷ್ಠ ಮಾನವ ಧರ್ಮದ ಸಂದೇಶ. ಮಾದಾರ ಚೆನ್ನಯ್ಯ ತನ್ನ ಅಪ್ಪ, ಡೋಹರ ಕಕ್ಕಯ ತನ್ನ ದೊಡ್ಡಪ್ಪ, ಕಿನ್ನರ ಬೊಮ್ಮಯ್ಯ ತನ್ನ ಅಣ್ಣನೆಂದು ಸಂಭೋಧಿಸುವ ಮೂಲಕ ಕೆಳಸ್ತರದ ಶೋಷಿತರ ಬದುಕಿನಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಶಕ್ತಿಯನ್ನು ತುಂಬಿದರು. ಬ್ರಾಹ್ಮಣ ಮಧುವರಸನ ಮಗಳಿಗೂ ಕೆಳಸ್ತರದ ಹರಳಯ್ಯನ ಮಗನಿಗೂ ಅಂತರ್ಜಾತಿ ವಿವಾಹ ಏರ್ಪಡಿಸಿ ಪಟ್ಟಭದ್ರ ಹಿತಾಸಕ್ತಿಗಳ ವಿರೋಧವನ್ನೂ ಎದುರಿಸಿದರೂ ತಮ್ಮ ಸಮಾಜ ಸುಧಾರಣೆಯ ಕಾರ್ಯವನ್ನು ನಿಲ್ಲಿಸಲಿಲ್ಲ.

ಸ್ತ್ರೀ ಸಮಾನತೆಯ ಪ್ರತಿಪಾದನೆ: ಅಂದಿನ ಕಾಲಘಟ್ಟದಲ್ಲಿ ಹೆಣ್ಣಿನ ಬಗ್ಗೆ ಇದ್ದ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಬಸವಣ್ಣನವರು ವಹಿಸಿದ ಪಾತ್ರ ವಿಶಿಷ್ಟ. ಹೆಣ್ಣು ಮಾಯೆಯಲ್ಲ, ಅಸ್ಪೃಶ್ಯಳಲ್ಲ, ಆತ್ಮಕ್ಕೆ ಲಿಂಗಭೇದವಿಲ್ಲ, ಹೆಣ್ಣು ಪ್ರತ್ಯಕ್ಷ ದೇವತೆ ಎಂಬ ಸಂದೇಶ ಸಾರುವ ಮೂಲಕ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ. ಅದರಿಂದಲೇ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ನಾಗಲಾಂಬಿಕೆ, ನೀಲಮ್ಮ, ದುಗ್ಗಳೆ, ಸತ್ಯಕ್ಕ ಮುಂತಾದ ವಚನಗಾರ್ತಿಯರು ಅನುಭವ ಮಂಟಪದಲ್ಲಿ ಪುರುಷರಿಗೆ ಸರಿಸಮಾನರಾಗಿ ಪಾಲ್ಗೊಂಡು ವಚನಗಳನ್ನು ರಚಿಸಿದ್ದಾರೆ.

ಕಾಯಕ-ದಾಸೋಹ: ಬಸವಣ್ಣನವರ ದೃಷ್ಟಿಯಲ್ಲಿ ಪ್ರತಿಯೊಬ್ಬ ಶರಣರಿಗೂ ಕಾಯಕ ಅನಿವಾರ್ಯ. ‘ಕಾಯಕವೇ ಕೈಲಾಸ’ ಎಂಬ ವಿಶ್ವಮಾನ್ಯ ಆರ್ಥಿಕ ಸಿದ್ಧಾಂತ ವಿಶ್ವಕ್ಕೆ ದೊರೆತ ಬಹುದೊಡ್ಡ ತತ್ವ. ಅವರ ದೃಷ್ಟಿಯಲ್ಲಿ ಕಾಯಕದಲ್ಲಿ ಮೇಲು-ಕೀಳೆಂಬುದಿಲ್ಲ. ಸತ್ಯಶುದ್ಧವಾಗಿ, ಸಮಾಜಮುಖಿಯಾಗಿರಬೇಕಷ್ಟೆ. ದಾಸೋಹವು ಪರಸ್ಪರ ನೀಡುವವರ ಹಾಗೂ ಪಡೆಯುವವರ ನಡುವೆ ಸಮಾನತೆಯ ಸ್ವಾಭಿಮಾನದಿಂದ ನಡೆಯಬೇಕಾದ ಒಂದು ಸಾಮಾಜಿಕ ಕರ್ತವ್ಯ. ಅವರ ದಾಸೋಹ ಸಿದ್ಧಾಂತದಲ್ಲಿ ಧಾರ್ವಿುಕ ಹಾಗೂ ಆರ್ಥಿಕ ಚಿಂತನೆ ಎರಡೂ ಅಡಗಿದೆ. ತಾವು ಕಾಯಕದಿಂದ ಗಳಿಸಿದ ಸಂಪತ್ತು ಲೋಕಕಲ್ಯಾಣಕ್ಕೆ ವಿನಿಯೋಗವಾಗಬೇಕೆಂಬ ಸದಾಶಯವಿದೆ.

ಸಾಂಸ್ಕೃತಿಕ ನಾಯಕ: ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೊಷಿಸಿದ್ದು, ಆ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಬೇಕಿದೆ. ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ ಸ್ಥಾಪನೆ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಸವ ಭವನಗಳ ನಿರ್ವಣ, ಅಪ್ರಕಟಿತ ವಚನಗಳ ಪ್ರಕಟಣೆ, ಸಂಶೋಧನೆಗೆ ಯೋಜನೆ ರೂಪಿಸಿದಲ್ಲಿ ‘ಸಾಂಸ್ಕೃತಿಕ ನಾಯಕ’ ಎಂಬುದು ಅರ್ಥಪೂರ್ಣವಾಗಲಿದೆ. ಬಸವಣ್ಣ ವಿಶ್ವ ಕಂಡ ಶ್ರೇಷ್ಠ ಸಮಾಜ ಸುಧಾರಕ. ಅವರ ಆದರ್ಶ ಮೌಲ್ಯಗಳನ್ನು ಅನುಷ್ಠಾನಗೊಳಿಸುವ ಸಂಕಲ್ಪ ತೊಟ್ಟಾಗ ಮಾತ್ರ ಬಸವಜಯಂತಿ ಆಚರಣೆಗೆ ಅರ್ಥ ಬರುತ್ತದೆ.

ದಮನಿತರಿಗೆ ದನಿ

| ಎಂ.ಬಿ.ಪಾಟೀಲ, (ಲೇಖಕರು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರು)

ಮೇಲ್ನೋಟಕ್ಕೆ ಚೆನ್ನಾಗಿ ಕಾಣುವ ಸಮಾಜದ ಒಳಗೆ ಹಲವು ಸಮಸ್ಯೆಗಳಿರುತ್ತವೆ. ಅಸಮಾನತೆ, ಬಡತನ, ಅಸ್ಪೃಶ್ಯತೆ, ಮೌಢ್ಯಾಚರಣೆ ಇವೇ ಅಂತಹ ಸಮಸ್ಯೆಗಳು. ಇವುಗಳನ್ನು ಪರಿಹರಿಸಲು ಕಾಲಕಾಲಕ್ಕೆ ಒಬ್ಬೊಬ್ಬ ಯುಗಪುರುಷರು ಆವಿರ್ಭವಿಸುತ್ತಾರೆ. ಅಂಥವರಲ್ಲಿ ಬಸವೇಶ್ವರರು ಪ್ರಮುಖರು. ಭಾರತದ ಚರಿತ್ರೆಯಲ್ಲಿ 12ನೇ ಶತಮಾನ ಸಾಮಾಜಿಕ ಸುಧಾರಣೆಯ ಕಾಲ. ಈ ಸಮಯದಲ್ಲಿ ಕಾಯಕ, ದಾಸೋಹ ಮತ್ತು ಸಮಾನತೆಯ ವಿಚಾರಧಾರೆಗಳು ಜನರನ್ನು ಮೇಲಕ್ಕೆತ್ತಿ, ಉದ್ಧರಿಸಿದವು. ಅವರಿವರೆನ್ನದೆ ಪ್ರತಿಯೊಬ್ಬರನ್ನೂ ಕಾಯಕ ತತ್ವ ಆಧಾರದಲ್ಲಿ ತನ್ನವರನ್ನಾಗಿ ಸ್ವೀಕರಿಸಿತು.

ದೋಣಿ ನಡೆಸುವ ಅಂಬಿಗರು, ಕ್ಷೌರಿಕ ವೃತ್ತಿಯ ಹಡಪದರು, ಬಟ್ಟೆ ಒಗೆಯುವ ಮಡಿವಾಳರು, ಚರ್ಮ ಹದಮಾಡುವ ಚಮ್ಮಾರರು, ಕಬ್ಬಿಣ ಕಾರ್ಯದ ಕಮ್ಮಾರರು ಸೇರಿದಂತೆ 108 ಸಮುದಾಯಗಳನ್ನು ಅವರ ಕಾಯಕ ವೃತ್ತಿಯ ಮೂಲಕ ಒಗ್ಗೂಡಿಸಿ, ಲಿಂಗದೀಕ್ಷೆಯ ಮೂಲಕ ಎದೆಯ ಮೇಲೆ ಇಷ್ಟಲಿಂಗ ಧರಿಸಿ, ಲಿಂಗವನ್ನು ಆಯತ ಮಾಡಿಕೊಂಡು ಲಿಂಗಾಯತರಾದರು. ಇದು ಭಾರತೀಯ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಕೆಳವರ್ಗದಲ್ಲಿದ್ದ ದುರ್ಬಲ, ದಮನಿತ ಸಮುದಾಯಗಳ ಸಬಲೀಕರಣ ಆಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಸಮಾಜೋಧಾರ್ವಿುಕ ಆಂದೋಲನವು ಬಡವ-ಬಲ್ಲಿದ, ಗಂಡು-ಹೆಣ್ಣು, ಮೇಲು-ಕೀಳು, ಸ್ಪೃಶ್ಯ- ಅಸ್ಪೃಶ್ಯ ಇಂತಹ ತಾರತಮ್ಯಗಳನ್ನು ದೂರ ತಳ್ಳಿ, ಅಂತರಂಗ ಶುದ್ಧಿ ಬಹಿರಂಗ ಶುದ್ಧಿಯನ್ನು ಸಾರಿತು.

ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನ ಮಾಡಲಿ ಬಡವನಯ್ಯಾ,/ಎನ್ನ ಕಾಲೇ ಕಂಬವು, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ, / ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ, ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ. ಈ ವಚನದಲ್ಲಿ ದೇಹವನ್ನೇ ದೇವಾಲಯವನ್ನಾಗಿಸಿ ನನ್ನ ಮತ್ತು ದೇವರ ಮಧ್ಯೆ ಮಧ್ಯವರ್ತಿಗಳಿಗೆ ಸ್ಥಾನ ಇಲ್ಲ ಎಂಬ ಅದ್ಬುತ ಕಲ್ಪನೆ ನೀಡಿದ ಬಸವಣ್ಣ ಈ ಬಗೆಯ ಅನನ್ಯತೆಯಿಂದ ‘ಭಕ್ತಿ ಭಂಡಾರಿ’ಯಾಗಿ ಜನಮನದಲ್ಲಿ ಶಾಶ್ವತ ‘ಜಗಜ್ಯೋತಿಯಾಗಿದ್ದಾರೆ. ಸಾಮಾನ್ಯವಾಗಿ ಭಾರತದ ಪ್ರಜಾಪ್ರಭುತ್ವದ ಚರಿತ್ರೆ ಬಂದಾಗ ಮ್ಯಾಗ್ನಾಕಾರ್ಟಾದ ನಿದರ್ಶನವನ್ನು ಹೇಳಲಾಗುತ್ತದೆ. ಆದರೆ ಮ್ಯಾಗ್ನಾಕಾರ್ಟಾಕ್ಕಿಂತ ಬಸವಣ್ಣನವರ ಪರಿಕಲ್ಪನೆಯ ಅನುಭವ ಮಂಟಪ ಮತ್ತು ಮಹಾಮನೆಗಳ ಹಿರಿಮೆ ನಿಜಕ್ಕೂ ದೊಡ್ಡದು. ಅವರಿಂದಾಗಿ ಜನಸಾಮಾನ್ಯರ ಭಾಷೆಯಲ್ಲಿ ಹುಟ್ಟಿದ ವಚನ ಸಾಹಿತ್ಯ ವಿಶ್ವದ ಅದ್ಭುತ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ.

‘ಕಾಯಕವೇ ಕೈಲಾಸ’ ಎನ್ನುವ ಆದರ್ಶದ ಹಿಂದೆ ಆರ್ಥಿಕ ಚಿಂತನೆಗಳು ಸ್ಪಷ್ಟವಾಗಿವೆ. ಕಾಯಕ ಮತ್ತು ದಾಸೋಹ ಪರಿಕಲ್ಪನೆ ಸಂಪತ್ತು ಕ್ರೋಢೀಕರಿಸದೆ ಸರ್ವರಿಗೂ ಸಮ ಪಾಲು-ಸಮ ಬಾಳು ಹಾಗೂ ಸವೋದಯದ ಸಾಧನವಾಗಿದೆ. ಆದರೆ ಸಮಾಜ ಬಸವಣ್ಣನವರ ಚಿಂತನೆಗಳ ಆಳ-ಅಗಲಗಳನ್ನು ಅರ್ಥ ಮಾಡಿಕೊಳ್ಳದೇ ಇರುವುದು ದುರಂತ. ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಇವರು ಸಮಾಜದಲ್ಲಿ ಅಲಕ್ಷಿತರು. ಕಕ್ಕಯ್ಯ ಡೋಹರ ಇಂಥವರ ಮನೆಯಲ್ಲಿ ಕೆಲಸ ಮಾಡುವ ಆಳುಗಳಿಗೆ ಹುಟ್ಟಿರುವ ಮಗ ನಾನು ಎಂದು ಹೇಳುವ ಮೂಲಕ ಎಲ್ಲ ಜಾತಿ, ಸಂಕೋಲೆಗಳನ್ನು ಕಿತ್ತೆಸೆದು ಎನಗಿಂತ ಕಿರಿಯರಿಲ್ಲ ಎಂದು ತನ್ನನ್ನು ತಾನು ಸಮಾಜದ ಕಟ್ಟಕಡೆಯ ವ್ಯಕ್ತಿಯೊಂದಿಗೆ ಸಮೀಕರಿಸಿಕೊಂಡ ಬಸವಣ್ಣನನ್ನು ನಾವಿಂದು ಆರಾಧನೆಗೆ ಮೀಸಲಾಗಿ ಇರಿಸಿದ್ದೇವೆ ಹೊರತು ಅನುಕರಿಸುತ್ತಿಲ್ಲ.

ಬಸವಣ್ಣ ಹೇಳಿದಂತೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದಿದ್ದರೆ ಕರ್ನಾಟಕದ ಸಮ-ಸಮಾಜ ನಿರ್ಮಾಣ ವಿಶ್ವಕ್ಕೆ ಮಾದರಿಯಾಗುತ್ತಿತ್ತು. ಬಸವಣ್ಣ ಇಂದಿಗೂ ಜೀವಂತವಾಗಿದ್ದರೆ, ಅದು ಮಾದಾರ-ಮೇದಾರ, ಹಡಪದ, ಮಡಿವಾಳ, ಚಮ್ಮಾರ-ಕಮ್ಮಾರ, ಅಂಬಿಗರು ಎಂಬ ನಿಜಶರಣ ಲಿಂಗವಂತರಲ್ಲಿ ಮಾತ್ರ ಎಂಬುದನ್ನು ಅಭಿಮಾನದಿಂದ ಹೇಳುತ್ತೇನೆ. ಅವರೇ ಬಸವಣ್ಣನ ವಾರಸುದಾರರಾಗಿ ಸತ್ಯ, ನಿಷ್ಠೆ, ಕಾಯಕದಿಂದ ಮುನ್ನಡೆದಿದ್ದಾರೆ. ಬಸವ ಜಯಂತಿಯ ಸಂದರ್ಭದಲ್ಲಿ 108 ಕಾಯಕ ಸಮುದಾಯಗಳು ಮತ್ತೆ ಒಂದಾಗಿ ಕಲ್ಯಾಣ ರಾಜ್ಯದ ಕನಸು ನನಸು ಮಾಡುವತ್ತ ಹೆಜ್ಜೆ ಹಾಕೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net