ಮದ್ವೆಯಾದ ಒಂದೇ ತಿಂಗಳಲ್ಲಿ ಪ್ರಿಯಕರನ ಜತೆ ಪತ್ನಿ ಪರಾರಿ: ರಘುವಂಶಿ ನೆನೆದು ನಾನು ಬಚಾವ್​ ಎಂದ ಗಂಡ! Raja Raghuvanshi

Raja Raghuvanshi
Published on

Raja Raghuvanshi : ಮದುವೆಯಾದ ಒಂದೇ ತಿಂಗಳಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಸಾಮಾನ್ಯ ಎನಿಸಿದರೂ ಓಡಿ ಹೋದ ಮಹಿಳೆಯ ಪತಿ ನೀಡಿದ ಹೇಳಿಕೆ ಅಚ್ಚರಿ ಉಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ.

ತನ್ನ ಪತ್ನಿ ಓಡಿ ಹೋಗಿದ್ದಕ್ಕೆ ಸ್ವಲ್ಪವೂ ಬೇಸರಿಸಿಕೊಳ್ಳದ ಗಂಡ, ಇತ್ತೀಚಗೆ ಮೇಘಾಲಯದಲ್ಲಿ ಪತ್ನಿಯಿಂದಲೇ ಭೀಕರವಾಗಿ ಹತ್ಯೆಯಾದ ರಾಜಾ ರಘುವಂಶಿಗೆ ಬಂದ ಸ್ಥಿತಿ ತನಗೆ ಬರಲಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾನೆ.

20 ವರ್ಷದ ಯುವತಿ ಮೇ 17 ರಂದು 23 ವರ್ಷದ ಸುನಿಲ್ ಎಂಬುವರನ್ನು ಮದುವೆಯಾದಳು. ಒಂಬತ್ತು ದಿನಗಳ ಕಾಲ ತನ್ನ ಅತ್ತೆಯ ಮನೆಯಲ್ಲಿದ್ದ ಆ ಯುವತಿ, ನಂತರ ತನ್ನ ತಾಯಿಯ ಮನೆಗೆ ಮರಳಿದಳು. ಇದಾದ ಬಳಿಕ ತನ್ನ ಗಂಡನ ಮನೆಗೆ ವಾಪಸ್ ಬಾರದೇ ಆಕೆ 10 ದಿನಗಳ ನಂತರ ತನ್ನ ಪ್ರಿಯಕರ ಜತೆ ಎಸ್ಕೇಪ್​ ಆಗಿದ್ದಳು. ಬಳಿಕ ಆಕೆಯ ಗಂಡ ನಾಪತ್ತೆ ಪ್ರಕರಣ ದಾಖಲಿಸಿದ್ದನು.

ಸೋಮವಾರ (ಜೂನ್​ 16) ಪೊಲೀಸ್​ ಠಾಣೆಗೆ ಬಂದ ಯುವತಿ, ನಾನು ನನ್ನ ಪ್ರಿಯಕರನ ಜತೆ ಜೀವನ ನಡೆಸಲು ಬಯಸುತ್ತೇನೆ ಎಂದು ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರ ಮುಂದೆಯೇ ಹೇಳಿದಳು. ಇದನ್ನು ಕೇಳಿ ಎಲ್ಲರು ಅಚ್ಚರಿಗೊಂಡರು.

ಯುವತಿ ಮತ್ತೆ ಪ್ರತ್ಯಕ್ಷಳಾಗಿ ತಾನು ಪ್ರಿಯಕರ ಜತೆ ಬಾಳುವೆ ಎಂದು ಹೇಳಿದ ಬಳಿಕ ಸ್ಥಳೀಯ ಬಿಸೌಲಿ ಪೊಲೀಸ್ ಅಧಿಕಾರಿಗಳು ಎರಡೂ ಕುಟುಂಬಗಳ ನಡುವೆ ರಾಜಿ ಮಾಡಿಕೊಳ್ಳಲು ಸಹಕರಿಸಿದರು. ಈ ವೇಳೆ ಗಂಡ-ಹೆಂಡತಿ ಪರಸ್ಪರ ಬೇರ್ಪಡಲು ಒಪ್ಪಿಕೊಂಡರು. ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ನೀಡಲಾದ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಹಿಂತಿರುಗಿಸಲಾಯಿತು. ಅಧಿಕಾರಿಯೊಬ್ಬರ ಪ್ರಕಾರ, ಎರಡೂ ಕಡೆಯವರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಈ ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸುನಿಲ್, ತನ್ನ ಜೀವನ ಹಾಳಾಗಲಿಲ್ಲ. ಹೀಗಾಗಿ ನನಗೆ ಖುಷಿಯಿದೆ ಎಂದರು. ಹನಿಮೂನ್‌ಗೆ ಆಕೆಯನ್ನು ನೈನಿತಾಲ್‌ಗೆ ಕರೆದುಕೊಂಡು ಹೋಗಬೇಕೆಂದು ಯೋಜಿಸಿದ್ದೆ. ಆದರೆ, ಆಕೆ ತನ್ನ ಪ್ರೇಮಿಯೊಂದಿಗೆ ಓಡಿ ಹೋಗಿ, ಆತನೊಂದಿಗೆ ಇರಲು ಬಯಸಿದ್ದಾಳೆ. ಇದರಿಂದ ನಾನು ಕೂಡ ಸಂತೋಷವಾಗಿದ್ದೇನೆ. ಏಕೆಂದರೆ, ಕನಿಷ್ಠ ಪಕ್ಷ ನಾನು ರಾಜಾ ರಘುವಂಶಿಯಂತೆ ಆಗಲಿಲ್ಲ. ಈಗ ನಾವು ಮೂವರೂ ಸಂತೋಷವಾಗಿದ್ದೇವೆ. ಅವಳು ಪ್ರೀತಿಯನ್ನು ಕಂಡುಕೊಂಡಳು ಮತ್ತು ನನ್ನ ಜೀವನ ಹಾಳಾಗಲಿಲ್ಲ ಎಂದು ಸುನೀಲ್​ ಹೇಳಿದರು.

ರಾಜಾ ರಘುವಂಶಿ ಪ್ರಕರಣದ ಹಿನ್ನೆಲೆ

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶದಲ್ಲೇ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಹನಿಮೂನ್ ಹೆಸರಿನಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಮೇಘಾಲಯಕ್ಕೆ ಕರೆದೊಯ್ದ ಪತ್ನಿ ಸೋನಂ, ಸುಪಾರಿ ಹಂತಕರನ್ನು ನೇಮಿಸಿ ಕೊಲೆ ಮಾಡಿಸಿದ್ದಾಳೆ. ಈ ಸುದ್ದಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೋನಂ ತನ್ನ ಪ್ರಿಯಕರ ರಾಜ್​ ಕುಶ್ವಾಹ್​ಗಾಗಿ ಈ ದುಷ್ಕೃತ್ಯ ಎಸಗಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ ಮೂಲದ ರಾಜಾ ರಘುವಂಶಿ ಮತ್ತು ಸೋನಂ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್​ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಮ್ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.

ಸೋನಂ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಂ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಂ​, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಂ, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು. ಸೋನಂ​ ಮೇಘಾಲಯಕ್ಕೆ ಹನಿಮೂನ್​ ಪ್ಲಾನ್​ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಂ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಂ, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ಈ ವೇಳೆ ಆತನ ಶವವನ್ನು ಒಂದು ಕಣಿಗೆ ಎಸೆಯಲು ಸೋನಂ ಸುಪಾರಿ ಹಂತಕರಿಗೆ ನೆರವಾದಳು. ನಂತರ, ಸೋನಂ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಕೊಲೆಯಲ್ಲಿ ಆಕೆಯ ಕೈವಾಡ ಇರುವುದು ಖಚಿತವಾಗುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net