

ಶಿವಮೊಗ್ಗ: ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆಂದು ಭೂಮಿ ನೀಡಿದ ರೈತರಿಗೆ ನಿವೇಶನ ನೀಡಿಲ್ಲ. ಹೀಗಾಗಿ ತ್ವರಿತವಾಗಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಸಂತೇಕಡೂರು ಆರ್.ವಿಜಯಕುಮಾರ್ (ದನಿ) ನೇತೃತ್ವದಲ್ಲಿ ಸಂತ್ರಸ್ತ ರೈತರು ಬುಧವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದರು.
ಏರ್‌ಪೋರ್ಟ್ ನಿರ್ಮಾಣಕ್ಕೆ ಭೂಮಿ ನೀಡುವ ಸಂದರ್ಭ ಅಂದಿನ ಸರ್ಕಾರ ಸಂತ್ರಸ್ತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿತ್ತು. ಇಷ್ಟು ವರ್ಷ ಕಳೆದರೂ ಭೂಮಿ ನೀಡಿದವರಿಗೆ ನಿವೇಶನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಮೀರ್ ಅಹ್ಮದ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಾಣವಾಗುತ್ತಿರುವ ಏರ್‌ಪೋರ್ಟ್‌ಗೆ ಜಮೀನು ನೀಡಿದವರನ್ನು ನಮ್ಮ ಸರ್ಕಾರ ಎಂದಿಗೂ ಕೈ ಬಿಡುವುದಿಲ್ಲ. ನಿವೇಶನ ಹಂಚಿಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕರಿಯಣ್ಣ, ರೈತ ಮುಖಂಡರಾದ ಕೃಷ್ಣಪ್ಪ, ಶಿವಾನಂದಪ್ಪ, ಶಿವಕುಮಾರ್, ಕೆ.ಸಿ.ನಾಗೇಶ್, ಗಣೇಶ್, ವೀರಭದ್ರಪ್ಪ ಇತರರಿದ್ದರು.