

ತಿ.ನರಸೀಪುರ: ಪ್ರಜ್ಞಾವಂತ ನಾಗರಿಕರು ಹಾಗೂ ವಿದ್ಯಾವಂತ ಜನತೆ ಅಂಬೇಡ್ಕರ್ ಅವರು ಹೇಳಿರುವಂತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವವರ ಕೈಗೆ ರಾಜಕೀಯ ಅಧಿಕಾರದ ಕೀಲಿಯನ್ನು ಕೊಡಬೇಕೆಂದು ಸಂಸದ ಸುನೀಲ್ ಬೋಸ್ ಕರೆ ನೀಡಿದರು.
ಪಟ್ಟಣದ ತ್ರಿವೇಣಿ ನಗರದ ಮಹಾನಾಯಕ ವೃತ್ತದಲ್ಲಿ ಬುಧವಾರ ಸಂಜೆ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಮಿತಿ ಆಯೋಜಿಸಿದ್ದ ಡಾ.ಬಿ..ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವ ಮಂತ್ರಿ ಮಹೋದಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಮತದಾನದ ಮೂಲಕ ಪ್ರತಿಯೊಬ್ಬರಿಗೂ ನೀಡಿರುವುದರಿಂದ ಸಂವಿಧಾನ ರಕ್ಷಕರಿಗೆ ಅಧಿಕಾರ ನೀಡಬೇಕೆಂದರು.
ಅಂಬೇಡ್ಕರ್ ಅವರು ಶೋಷಿತ ಪರಿಶಿಷ್ಟರಿಗಷ್ಟೇ ಸೀಮಿತರಲ್ಲ. 1935ರಲ್ಲಿ ಆರ್‌ಬಿಐ ಸ್ಥಾಪನೆ ಮಾಡಿದ್ದರಿಂದಲೇ ಪ್ರಪಂಚದ ಆರ್ಥಿಕತೆ ಹಾಳಾಗಿದ್ದರೂ ದೇಶದ ಅರ್ಥವ್ಯವಸ್ಥೆ ಸುಭದ್ರವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ ಹಗಲಿರುಳು ದುಡಿಸಿಕೊಳ್ಳಲಾಗುತ್ತಿತ್ತು. ಕಾರ್ಮಿಕರ ಶೋಷಣೆಯನ್ನ ತಪ್ಪಿಸಲು ಹೋರಾಟವನ್ನು ಮಾಡುವ ಮೂಲಕ ದುಡಿಮೆಗೆ ಕಾಲಮಿತಿಯನ್ನು ನಿಗದಿಗೊಳಿಸುವಂತೆ ಮಾಡಿದರು. ಎಲ್ಲ ಸಮುದಾಯದ ಮಹಿಳೆಯರಿಗೆ ಕೌಟುಂಬಿಕವಾಗಿ ಆಸ್ತಿ ಹಕ್ಕಿನಲ್ಲಿ ಸಮಾನ ಅವಕಾಶ ಸಿಗಬೇಕೆಂದು ಪ್ರತಿಪಾದಿಸಿದ ಹಿಂದು ಕೋಡ್ ಬಿಲ್ ಸಂಸತ್ತಿನಲ್ಲಿ ಮಂಡನೆಯಾಗದಿದ್ದಕ್ಕೆ ಸಚಿವ ಸ್ಥಾನವನ್ನು ತೊರೆದರು ಎಂದು ಸುನೀಲ್ ಬೋಸ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಹಾಗೂ ಸಂವಿಧಾನದ ಆಶಯಗಳನ್ನು ತಪ್ಪಾಗಿ ಅರ್ಥೈಸಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವವರು ಅಧಿಕಾರದಲ್ಲಿರುವ ಕಾಲಘಟ್ಟದ್ದಲಿದ್ದೇವೆ. ಬಲಿಷ್ಠ ಭಾರತವನ್ನು ಕಟ್ಟುವ ಉದ್ದೇಶದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಮಾಜಿಕ ನ್ಯಾಯದ ರಥವಾಗಿರುವ ಭಾರತೀಯ ಸಂವಿಧಾನವನ್ನು ಮುಂದಕ್ಕೆ ಕೊಂಡೊಯ್ಯುವ, ಹಿಂದಕ್ಕೆ ತಳ್ಳುವ ಪಟ್ಟಭದ್ರರು ಮತ್ತು ಕೋಮುವಾದಿಗಳ ಕೈಗೆ ರಾಜಕೀಯ ಅಧಿಕಾರವನ್ನು ಕೊಡಬಾರದು ಎಂದು ಎಚ್ಚರಿಸಿದರು.
ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಮಾಜಿ ಸದಸ್ಯ ಕೆ.ಮಹದೇವ, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ.ರೇವಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯೆ ಬಿ.ಬೇಬಿ ಹೇಮಂತ್‌ಕುಮಾರ್, ಸೋಸಲೆ ಪಿಎಸಿಸಿಎಸ್ ನಿರ್ದೇಶಕ ಎಸ್.ನಂಜುಂಡಯ್ಯ, ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ಮಹೇಶ್, ಕಾರ್ಯದರ್ಶಿ ಕೆಂಚಪ್ಪ, ಖಜಾಂಚಿ ಶ್ರೀಧರ್, ಸಲಹೆಗಾರ ಡಿ.ಎಂ.ರಂಗಸ್ವಾಮಿ, ನಿರ್ದೇಶಕರಾದ ಮರಿಸ್ವಾಮಿ, ಎಂ.ಪುಟ್ಟರಾಜು, ಎಸ್. ಬಸವರಾಜು, ಎಂ.ಮಿಥುನ್, ಆರ್.ಮಹದೇವಸ್ವಾಮಿ, ಸಿದ್ದರಾಜು, ರಂಗದಾಸಯ್ಯ, ಎಂ.ಶಿವಣ್ಣ, ಬಿ.ಮಲ್ಲರಾಜು, ವಕೀಲ ಎಂ.ಶಿವಪ್ರಸಾದ್, ಮುಖಂಡ ಎನ್.ನಿಂಗಯ್ಯ ಹಾಗೂ ಇತರರು ಇದ್ದರು.