

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ತಕ್ಷಣೀ ಭೂಮಿ ಹಂಚಿಕೆ ಮಾಡಬೇಕು. ಅರಣ್ಯ ಇಲಾಖೆ ಕೆಲವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು ಸರ್ಕಾರದ ನಿರ್ಧಾರ ಆಗುವವರೆಗೂ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಆಗ್ರಹಿಸಿದರು.
ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿಗಾಗಿ 1959-69ರ ನಡುವೆ ರಾಜ್ಯ ಸರ್ಕಾರ ನೀಡಿದ 9,934.02 ಎಕರೆ ಅರಣ್ಯಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ಹೊರತುಪಡಿಸಿದ್ದು ಸಂತ್ರಸ್ತರನ್ನು ಒಕ್ಕಲೆಬ್ಬಿಸದೆ ಭೂಮಿ ಹಂಚಿಕೆ ಜತೆಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1959-60ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಉಂಟಾಗಿದ್ದು 1978ರಲ್ಲಿ ನೋಟಿಫೈ ಮಾಡಿದ ಸಂತ್ರಸ್ತರ ಭೂಮಿಯನ್ನು ನೀಡಲು ಕಳೆದ ಬಿಜೆಪಿ ಸರ್ಕಾರ ಡಿನೋಟಿಫಿಕೇಷನ್ ಮಾಡಲು ವಿಫಲವಾಗಿದೆ. ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿರುವ ಭೂಮಿಯನ್ನು ಅರಣ್ಯ ಇಲಾಖೆ ಕುತಂತ್ರದ ಮೂಲಕ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಶರಾವತಿ ಸಂತ್ರಸ್ತರ ಕುರಿತು ಸೆ.14ರಂದು ಸಿಎಂ ಸಿದ್ದರಾಮಯ್ಯ ಅವರು ಕಂದಾಯ, ಅರಣ್ಯ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಎರಡೂ ಇಲಾಖೆಗಳ ಅಧಿಕಾರಿಗಳ ಜತೆ ಉನ್ನತಮಟ್ಟದ ಸಭೆ ನಡೆಸಲಿದ್ದು ಸರ್ಕಾರದ ತೀರ್ಮಾನ ಆಗುವವರೆಗೂ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಿದೆ ಎಂದರು.
ಅರಣ್ಯ ಇಲಾಖೆ ಹುಂಚ ಭಾಗದಲ್ಲಿ 50ರಿಂದ 60 ಮನೆಯವರಿಗೆ ನೋಟಿಸ್ ನೀಡಿದ್ದು ಇದು ಆಗಬಾರದು. ಒಡಿಶಾ ಸರ್ಕಾರ 1996ರಿಂದ ಈಚೆಗೆ ಮೀಸಲು ಅರಣ್ಯ ಭೂಮಿಯನ್ನು ಕೈಬಿಟ್ಟಿದೆ. ಒಡಿಶಾದಲ್ಲಿ ಆಗುವ ಕೆಲಸ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
9,934.02 ಎಕರೆ ಭೂಮಿಯನ್ನು ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಡಿನೋಟಿಫೈ ಮಾಡಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸ್ಥಳೀಯರೊಬ್ಬರು ರಿಟ್ ಹಾಕಿದ್ದರ ಕಾರಣ ಭೂಮಿ ಡಿನೋಟಿಫೈ ಆಗಿಲ್ಲ. ಆದರೆ ಈಗ ಆಶಾಭಾವನೆ ಮೂಡಿದ್ದು ಸಂಸತ್‌ನಲ್ಲಿ ಆ.4ರಂದು ಗೆಜೆಟ್ ಆಗಿದೆ. ಅರಣ್ಯ ಭಾಗವನ್ನು ಪಟ್ಟಿ ಮಾಡಲಾಗಿದೆ. 1996ರ ಡಿಸೆಂಬರ್ ಹಿಂದೆ ಅರಣ್ಯೇತರ ಎಂದು ಘೋಷಿಸಿದ್ದರೆ, ಆ ಭೂಮಿಯನ್ನು ಕೈಬಿಡಲಾಗಿದೆ ಎಂದು ಘೋಷಿಸಿದೆ. ಇದನ್ನು ಒಡಿಶಾ ಸರ್ಕಾರ ಸೊಪ್ಪಿನ ಬೆಟ್ಟ, ಕಾನು ಕುಮ್ಕಿ, ಡೀಮ್ಡ್ ನೋಟಿಫೈ ಕೈಬಿಟ್ಟಿದೆ. ಇದನ್ನು ರಾಜ್ಯದಲ್ಲಿಯೂ ಕೈಬಿಡುವಂತೆ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ಮುಖಂಡರಾದ ಕೆ.ಪಿ.ದುಗ್ಗಪ್ಪಗೌಡ, ಜಿ.ಲೋಕೇಶ್, ಮಂಜುನಾಥ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.