

ಸಾಗರ: ದಲಿತ ಸಮುದಾಯದವರಿಗೆ ಭೂಹಕ್ಕು ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಭೂಮಿ ಆತ್ಮಾಭಿಮಾನದ ಪ್ರತೀಕ. ದಲಿತ ಸಮುದಾಯ ಭೂಹಕ್ಕಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಬೇಡಿಕೆ ಈಡೇರಿಲ್ಲ. ದೇಶದಲ್ಲಿಯೇ ಅತಿಕಡಿಮೆ ಭೂಮಿ ಹಕ್ಕು ಹೊಂದಿದವರ ಸಾಲಿನಲ್ಲಿ ದಲಿತರು ಇದ್ದಾರೆ. ಆಳುವ ಸರ್ಕಾರಗಳು ದಲಿತ ಸಮುದಾಯಕ್ಕೆ ಭೂಹಕ್ಕು ನೀಡುವ ಭರವಸೆ ನೀಡುತ್ತಿದ್ದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳು ಬಗರ್‌ಹುಕುಂ ಅಡಿ ಸಲ್ಲಿಸಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದರು.
ಸಮಿತಿ ಮುಖಂಡ ಸೋಮಶೇಖರ ವೀರಾಪುರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದಲಿತರಿಗೆ ಭೂಮಿ ಇಲ್ಲ. ಬಗರ್‌ಹುಕುಂ ಅಡಿ ನೀಡಿದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ. ದಲಿತ ಸಮುದಾಯಕ್ಕೆ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ. ದಲಿತರಿಗೆ ಭೂಮಿ ಹಕ್ಕು ನೀಡಬೇಕು ಎಂದು ರಾಜ್ಯಾದ್ಯಂತ ಮನವಿ ನೀಡಲಾಗುತ್ತಿದೆ. ಸರ್ಕಾರ ನಮ್ಮ ಅರ್ಜಿಯನ್ನು ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸಮಿತಿ ತಾಲೂಕು ಸಂಚಾಲಕ ಪ್ರೇಮಕುಮಾರ್, ಪ್ರಮುಖರಾದ ಬೂದ್ಯಪ್ಪ, ಸುಬ್ಬಪ್ಪ, ಲಕ್ಷ್ಣಣ, ಸಚಿನ್, ಅಣ್ಣಪ್ಪ, ಪರಶುರಾಮ, ರಮೇಶ್, ಉಮೇಶ್ ಇತರರಿದ್ದರು.