ಆಚಾರ, ಆಚರಣೆಗೆ ಮಹತ್ವ ಕೊಡಿ

sor shraavana
ಸೊರಬದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ತುರಬಿಗುಡ್ಡ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಘನಬಸವ ಅಮರೇಶ್ವರ ಶ್ರೀ, ವಿಶ್ವನಾಥ ಗೌಡ, ರೇಣುಕಮ್ಮ ಇದ್ದರು.
Published on

ಸೊರಬ: ಬದುಕಿನಲ್ಲಿ ವಿಚಾರಕ್ಕಿಂತ ಆಚಾರ ಹಾಗೂ ಅದರ ಆಚರಣೆ ಬಹುಮುಖ್ಯ ಎಂದು ಮೂಡಿ ಹಾಗೂ ತುರಬಿಗುಡ್ಡ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾನುಕೇರಿ ಮಠದಲ್ಲಿ ಬುಧವಾರ ಅಕ್ಕನ ಬಳಗದಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಜಡೆ ಹಿರೇಮಠದ ಸಿದ್ಧಬಸವ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಆಚಾರ-ವಿಚಾರ ಹೇಳಿದರೆ ಸಾಲದು. ಹೇಳುವವರು ಸಹ ಪಾಲನೆ ಮಾಡಬೇಕು. ಆಗ ಸಮಾಜ ಪರಿವರ್ತನೆ ಸಾಧ್ಯ.ಹಿಂದಿನ ಕಾಲದಲ್ಲಿ ವ್ಯಕ್ತಿಗಳ ಗುಣಗಾನ ಮಾಡಬೇಕಾದರೆ ಅವನ ಆಚಾರ-ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಬದುಕಿನಲ್ಲಿ ವಿಚಾರಕ್ಕಿಂತ ಆಚಾರ ಹಾಗೂ ಅದರ ಆಚರಣೆಗೆ ಮಹತ್ವ ಹಿರಿಯರಿಗೆ ಗೊತ್ತಿತ್ತು. ಇಂದು ನಾವು ಆಚಾರಗಳನ್ನು ಬಿಟ್ಟು ಕೇವಲ ವಿಚಾರಗಳ ಬೆನ್ನು ಹತ್ತಿದ್ದೇವೆ ಎಂದರು.
ಜಡೆ ಬಂಕಸಾಣದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇಳುವಿಕೆ ಶುದ್ಧಿಗೊಳ್ಳಬೇಕು. ಒಳ್ಳೆಯ ಮಾತುಗಳಿಂದ ಕಿವಿ, ಉತ್ತಮ ದರ್ಶನದಿಂದ ನಮ್ಮ ನೇತ್ರಗಳು, ಶ್ರೇಷ್ಠ ನುಡಿಗಳಿಂದ ಬಾಯಿ, ಉತ್ತಮ ಸ್ಪರ್ಶದಿಂದ ಚರ್ಮ ಶುದ್ಧವಾಗಬೇಕು. ಹೀಗೆ ಇಂದ್ರಿಯಗಳ ಶುದ್ಧೀಕರಣವಾದರೆ ಮನುಷ್ಯನ ಮನಸ್ಸು ನಿರ್ಮಲವಾಗುತ್ತದೆ ಎಂದು ತಿಳಿಸಿದರು.
ಮನೋ ಶುದ್ಧಿಯೇ ಆತ್ಮ ಸಾಕ್ಷಾತ್ಕಾರಕ್ಕೆ ಸೋಪಾನ. ಇಂದ್ರಿಯಗಳ ಶುದ್ಧತೆಗೆ ಆಚಾರ-ವಿಚಾರಗಳು ಬಹುಮುಖ್ಯವಾಗುತ್ತವೆ. ಜಡೆ ಹಿರೇಮಠದ ಸಿದ್ಧಬಸವ ಸ್ವಾಮಿಗಳು ಆಚಾರ-ವಿಚಾರ ನಿಷ್ಠರಾಗಿ ಸಮಾಜಕ್ಕೆ ಮಾದರಿಯಾಗಿದ್ದರು. ಅವರು ನೀಡುತ್ತಿದ್ದ ಆಯುರ್ವೇದ ಔಷಧ ಹಾಗೂ ನೀಡುತ್ತಿದ್ದ ನ್ಯಾಯ ನಿರ್ಣಯ ಜನಮಾನಸದಲ್ಲಿ ಜನಜನಿತವಾಗಿದ್ದನ್ನು ಸ್ಮರಿಸಿಕೊಳ್ಳಬಹುದು ಎಂದರು.
ಸೊರಬ ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಜಯಮಾಲಾ ಇದ್ದರು. ಅಕ್ಕನ ಬಳಗದಿಂದ ಭಜನೆ ಹಾಗೂ ವಚನ, ವಿಶ್ಲೇಷಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net