ಸಿಎಂ ನಿಧಿಗೆ ಹೆಚ್ಚೆಚ್ಚು ಪರಿಹಾರ ಕೊಡಿ: 24 ಲಕ್ಷ ಬಿಎಸ್​ವೈ, ಕಾರಜೋಳ 5 ಲಕ್ಷ ರೂ., ಕೈ ಶಾಸಕರೆಲ್ಲ 1 ಲಕ್ಷ ರೂ. ಕೊಡಿ ಎಂದ ಸಿದ್ದು

CM
Published on

ಬೆಂಗಳೂರು: ಕರೊನಾ ಪರಿಹಾರ ನಿಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ವರ್ಷದ ವೇತನ 24.10 ಲಕ್ಷ ರೂ. ಅನ್ನು ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಆರಂಭಿಸಿರುವ ಕೊರೊನಾ ಪರಿಹಾರ ನಿಧಿಗೆ ವೈಯಕ್ತಿಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ. ದೇಣಿಗೆ ನೀಡುವಂತೆ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ತಾವೇ ಮೊದಲು ಪರಿಹಾರ ನಿಧಿಗೆ ಹಣ ನೀಡುವ ಮೂಲಕ ಉಳಿದ ಶಾಸಕರಿಗೂ ಹೆಚ್ಚೆಚ್ಚು ಮೊತ್ತ ನೀಡುವಂತೆ ಕೋರಿದರು. ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್​ಗೆ 24.10 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರು ಶಕ್ತಿ ಮೀರಿ ನೆರವು ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದರು.

ಕೊರೊನಾ ವೈರಸ್ ರಾಜ್ಯದ ಜನತೆಯನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಮೊದಲೇ ಪ್ರವಾಹದಿಂದ ನಲುಗಿದ್ದ ನಾಡಿನ ರೈತ, ಕೂಲಿ ಕಾರ್ವಿುಕರನ್ನೂ ಈ ವೈರಸ್ ಕಂಗೆಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿತ್ತು. ಆದರೆ ಎರಡೂ ಸರ್ಕಾರಗಳಿಂದ ಪರಿಹಾರ ಕಾರ್ಯ ಸೂಕ್ತವಾಗಿ ನಡೆಯುತ್ತಿಲ್ಲ ಎಂದು ಸಿದ್ದರಾಮಯ್ಯ, ಪಕ್ಷದ ಶಾಸಕರಿಗೆ ಮಾಡಿರುವ ಮನವಿಯಲ್ಲಿ ಈ ಅಂಶ ಪ್ರಸ್ತಾಪಿಸಿದ್ದಾರೆ. ತಂತಮ್ಮ ಕ್ಷೇತ್ರಗಳಲ್ಲಿದ್ದುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಶಾಸಕರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಬೊಮ್ಮಾಯಿ ದೇಣಿಗೆ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ವೇತನವನ್ನು ದೇಣಿಗೆಯಾಗಿ ನೀಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪತ್ರ ಕೊಟ್ಟಿದ್ದು, ಸದ್ಯದಲ್ಲಿಯೇ ಚೆಕ್ ತಲುಪಿಸಲಿದ್ದಾರೆ. ಏಪ್ರಿಲ್​ನಿಂದ ಮುಂದಿನ ಮಾರ್ಚ್​ತನಕ ವೇತನವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ 5 ಲಕ್ಷ ರೂ. ನೀಡಿದ್ದಾರೆ.

ಪಿಎಂ ಕೇರ್ಸ್ ಫಂಡ್​ಗೆ ಪೇಟಿಎಂ ನೆರವು

ಬೆಂಗಳೂರು: ಕರೊನಾ ವಿರುದ್ಧ ಹೋರಾಟ ನಡೆಸಲು ಪ್ರಧಾನಿ ಮೋದಿ ಕೋರಿರುವ ಧನ ಸಹಾಯಕ್ಕೆ ದಾನಿಗಳು ‘ಪೇಟಿಯಂ’ ಮೂಲಕ ಹಣ ಸಂದಾಯ ಮಾಡಬಹುದು. ಪಿಎಂ ಕೇರ್ಸ್ ಫಂಡ್​ಗೆ ಪೇಟಿಯಂ ಬಳಕೆದಾರರು ಹಣ ಕಳುಹಿಸಿದರೆ ಪೇಟಿಯಂ ಕಡೆಯಿಂದ 10 ರೂ. ಕೇರ್ಸ್ ಫಂಡ್​ಗೆ ವರ್ಗಾವಣೆಗೊಳ್ಳಲಿದೆ. ಗ್ರಾಹಕರು ಪೇಟಿಯಂ ಮೂಲಕ ಪ್ರತಿ ಬಾರಿ ಧನ ಸಹಾಯ ಮಾಡಿದಾಗ ಅಥವಾ ಪ್ರತಿ ಬಾರಿ ವಹಿವಾಟು ನಡೆಸಿದಾಗ 10 ರೂ.ಗಳನ್ನು ಪೇಟಿಯಂ ಕೇರ್ಸ್ ಫಂಡ್​ಗೆ ನೀಡಲಿದೆ.

ನೆರವಿಗೆ ಮುಂದಾದ ಮಹಿಳಾ ಆಯೋಗ

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಮಹಿಳೆಯರಿಗೆ ತುರ್ತು ಸಂದರ್ಭಗಳಲ್ಲಿ ಅಗತ್ಯ ನೆರವು ನೀಡಲು ರಾಜ್ಯ ಮಹಿಳಾ ಆಯೋಗ ಮುಂದಾಗಿದೆ. ಕರ್ಫ್ಯೂ ಸಂದರ್ಭ ಮಹಿಳೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಒತ್ತಡವಿರುತ್ತದೆ. ಮಕ್ಕಳ ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಪತಿ ಮನೆಯಲ್ಲೇ ಕೆಲಸ ಮಾಡುತ್ತಾರೆ. ಇವೆಲ್ಲವನ್ನೂ ನಿಭಾಯಿಸುವ ಜತೆಗೆ ಮನೆ ಕೆಲಸಗಳನ್ನೂ ಮಾಡಬೇಕಿದೆ. ದುಡಿಯುವ ಮಹಿಳೆಯಾಗಿದ್ದರೆ ಒತ್ತಡ ಇನ್ನೂ ಹೆಚ್ಚಾಗುತ್ತೆ. ಇದರಿಂದ ಮಹಿಳೆಯರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಅಂಥವರಿಗೆ ಮಾನಸಿಕ ಸ್ಥೈರ್ಯ ತುಂಬುವ ಅಗತ್ಯವಿದೆ ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ಅಥವಾ ತೊಂದರೆಯಾದರೆ ಆಯೋಗದ ಅಧ್ಯಕ್ಷರನ್ನು ಫೋನ್ (9481004361) ಹಾಗೂ ಇ-ಮೇಲ್ (kಠ್ಚಡಿಚಿಚ್ಞಜ123ಜಞಚಜ್ಝಿ.ಟಞ) ಮೂಲಕ ಸಂರ್ಪಸಿ ಅಗತ್ಯ ಸಲಹೆ ಪಡೆಯಬಹುದು. ಅಲ್ಲದೆ, ದೂರುದಾರ ಮಹಿಳೆಯ ವಾಸಸ್ಥಾನ ವ್ಯಾಪ್ತಿಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net